ಗೋಣಿಕೊಪ್ಪ ವರದಿ, ಏ. 25: ಹಾಕಿ ಕೂರ್ಗ್ ಸಂಸ್ಥೆ ವತಿಯಿಂದ ಪೊನ್ನಂಪೇಟೆಯ ಆಸ್ಟ್ರೋಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹಾಕಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಒಲಂಪಿಯನ್ ಚೆಪ್ಪುಡೀರ ಪೂಣಚ್ಚ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಹಾಕಿ ಕೂರ್ಗ್ ಸಂಸ್ಥೆ ನಿರಂತರವಾಗಿ ಹಾಕಿ ಕ್ರೀಡೆಗೆ ಉತ್ತೇಜನ ನೀಡಿ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಸಂಸ್ಥೆಯ ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟದ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪೊನ್ನಂಪೇಟೆಯ ಆಸ್ಟ್ರೋಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ಸಂಸ್ಥೆ ತರಬೇತಿ ಶಿಬಿರಗಳನ್ನು ಆಯೋಜಿಸಿ ಭವಿಷ್ಯದಲ್ಲಿ ದೇಶೀಯ ತಂಡಕ್ಕೆ ಆಟಗಾರರನ್ನು ತಯಾರು ಮಾಡುವ ಕೇಂದ್ರವಾಗಿ ಬೆಳೆದಿದೆ ಎಂದು ಹೇಳಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 103 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಒಲಂಪಿಯನ್ ಚೆಪ್ಪುಡೀರ ಪೂಣಚ್ಚ ವಿತರಿಸಿದರು. ತರಬೇತುದಾರ ಕುಪ್ಪಂಡ ಸುಬ್ಬಯ್ಯ, ಅರುಣ್, ಹರಿಣಾಕ್ಷಿ, ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಪಳಂಗಂಡ ಲವ, ಖಜಾಂಚಿ ಐನಂಡ ಲಾಲ ಅಯ್ಯಣ್ಣ, ನಿರ್ದೇಶಕ ಬುಟ್ಟಿಯಂಡ ಚಂಗಪ್ಪ, ಶಿಬಿರ ನಡೆಸಲು ಸಹಕರಿಸಿದ ಕೋದಂಡ ಸೋಮಣ್ಣ, ಮಾಪಂಗಡ ಗೋಪಾಲ್, ಮಾಪಂಗಡ ಸಂಜಯ್, ಅಳಮೇಂಗಡ ರಾಜಪ್ಪ, ಬಯವಂಡ ಕಿಶೋರ್, ಸಣ್ಣುವಂಡ ಲೋಕೇಶ್ ಇದ್ದರು.