ಕೂಡಿಗೆ, ಏ. 25: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಮೂರು ತಿಂಗಳ ಹಿಂದೆ ಉದ್ಘಾಟನೆಗೊಂಡ ಸಂಗೀತ ಕಾರಂಜಿ ವೀಕ್ಷಣೆಗೆ ಅವಕಾಶ ಸ್ಥಗಿತಗೊಳಿಸಲಾಗಿದೆ.

ಕಳೆದ ಒಂದು ತಿಂಗಳಿನಿಂದ ಅತ್ಯಾಧುನಿಕ ರೀತಿಯಲ್ಲಿ ನೀರಿನ ರಮಣೀಯ ಸಂಗೀತ ಕಾರಂಜಿಯ ದೃಶ್ಯವನ್ನು ನೋಡಲು ಸಾವಿರಾರು ಪ್ರವಾಸಿಗರು ಸಂಜೆವರೆಗೆ ಕಾದುಕುಳಿತು ಸಂಗೀತ ಕಾರಂಜಿಯ ದೃಶ್ಯವನ್ನು ನೋಡಿ ಹಿಂತಿರುಗುತ್ತಿದ್ದರು. ಆದರೆ, ಫೆಬ್ರವರಿ ತಿಂಗಳಲ್ಲಿ ಟ್ರಿಬ್ಯೂನಲ್ ಹೈತೀರ್ಪಿನ ವಿಚಾರವಾಗಿ ಮೇಲಾಧಿಕಾರಿಗಳ ಆದೇಶದಂತೆ ಪ್ರವಾಸಿಗರನ್ನು ಹಾರಂಗಿ ಜಲಾಶಯಕ್ಕೆ ತೆರಳಲು ಪ್ರವೇಶ ನಿರ್ಬಂಧ ಹೇರಲಾಗಿತ್ತು.

ಅಂದಿನಿಂದ ಇಂದಿನವರೆಗೂ ನಿರ್ಬಂಧ ಮುಂದುವರೆದಿದ್ದು, ಪ್ರವಾಸಿಗರು ನಿರಾಸೆಯಿಂದ ಹಿಂತಿರುಗುತ್ತಿರುವದು ಕಂಡುಬಂದಿದೆ. ಇದೀಗ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದು, ರಜೆಯ ಹಿನ್ನೆಲೆ ಜಿಲ್ಲೆಗೆ ಆಗಮಿಸುವ ಸಾವಿರಾರು ಪ್ರವಾಸಿಗರು ಹಾರಂಗಿ ಸಂಗೀತ ಕಾರಂಜಿ ವೀಕ್ಷಣೆಗೆ ಹಾರಂಗಿ ಅಣೆಕಟ್ಟೆಗೆ ಬಂದು ನಿರ್ಬಂಧದ ವಿಷಯ ತಿಳಿದು ಹಿಂತಿರುಗುತ್ತಿದ್ದಾರೆ.

ಸಂಗೀತ ಕಾರಂಜಿಗೆ ಬೇಕಾಗುವ ಜನರೇಟರ್, ಟಿಕೇಟ್ ವ್ಯವಸ್ಥೆ, ರಕ್ಷಣೆ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಚುನಾವಣೆ ನೀತಿ ಸಂಹಿತೆ ಬಂದ ಹಿನ್ನೆಲೆ ಈ ವ್ಯವಸ್ಥೆಗಳ ಉದ್ಘಾಟನೆ ಸಾಧ್ಯವಾಗದೆ, ಸಂಗೀತ ಕಾರಂಜಿಯ ವೀಕ್ಷಣೆಗೆ ಅವಕಾಶ ನೀಡಲಾಗಿಲ್ಲ ಎಂದು ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.