ಮಡಿಕೇರಿ, ಏ. 26: ಚಂದ್ರಮೌಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಆಗದಂತೆ ಹಿನ್ನೆಲೆಯಲ್ಲಿ ತಾನೇನೂ ಕುತಂತ್ರ ಮಾಡಿಲ್ಲ. ಹೈಕಮಾಂಡಿಗೆ ದೂರು ನೀಡಿಲ್ಲ. ಆದರೆ ವಿನಾಕಾರಣ ನನ್ನ ವಿರುದ್ಧ ‘ ಹಾವು - ಚೇಳಿನಂತೆ’ ಎಂದು ಆಪಾದಿಸಿರುವದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೀಗಷ್ಟೇ ದೂರಿರುವೆ ಎಂದು ಎಐಸಿಸಿ ವಕ್ತಾರ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ‘ಶಕ್ತಿ’ಯೊಂದಿಗೆ ನುಡಿದರು.ಕಳಂಕಿತ ಮೆಹುಲ್ ಚೋಕ್ಸಿಗೆ ಚಂದ್ರಮೌಳಿ ವಕಾಲತ್ತು ವಹಿಸಿದ್ದುದು ಮೊದಲು ತನಗೆ ತಿಳಿದೇ ಇರಲಿಲ್ಲ ಎಂದ ಕಾಳಪ್ಪ, ವಕೀಲನಾಗಿ ವೃತ್ತಿಧರ್ಮಕ್ಕೆ ಅನುಗುಣವಾಗಿ ವಕಾಲತ್ತು ವಹಿಸಿರುವದು ಖಂಡಿತ ತಪ್ಪಲ್ಲ ಎಂದು ತಾನು ಎಂದೋ ಫೇಸ್ಬುಕ್ಕಿನಲ್ಲಿ ಹಾಕಿರುವೆ ಎಂದರು. ತಾನೊಬ್ಬ ವ್ಯಕ್ತಿಗೆ ಇಂದು ವಕಾಲತ್ತು ವಹಿಸಿ, ಆತ ಮತ್ಯಾವತ್ತೊ ಅಪರಾಧದಲ್ಲಿ ಸಿಲುಕಿದರೆ ಅದಕ್ಕೆ ವಕೀಲ ಹೊಣೆಯಲ್ಲ. ಅಂತೆಯೇ ಮೆಹುಲ್ ಚೋಕ್ಸಿ ವಿಷಯದಲ್ಲೂ ಚಂದ್ರಮೌಳಿ ಅವರಲ್ಲಿ ತಪ್ಪು ಕಂಡುಹಿಡಿಯುವದು ಸರಿಯಲ್ಲ ಎಂದು ತಾವು ಬರೆದ ಬಗ್ಗೆ ಹೇಳಿದರು. ಈ ವಿಚಾರದಲ್ಲಿ ತನ್ನ ಅಭಿಪ್ರಾಯ ಮೆಚ್ಚಿರುವ ಚಂದ್ರಮೌಳಿ, ತನ್ನ ಬರಹವನ್ನು ಕಾಂಗ್ರೆಸ್ ನಾಯಕರುಗಳಿಗೆ ತೋರಿಸಿದ್ದು, ಯಾವದೇ ಕಾರಣದಿಂದಲೂ ತನ್ನಿಂದ ಅವರ ಸೀಟು ಕೈ ತಪ್ಪಲಿಲ್ಲ ಎಂದರು.ಇಷ್ಟಾಗಿ ತಾನು ಅದಕ್ಕೆ ಕಾರಣ ಆಗಿದ್ದರೆ, ಆ ಸ್ಥಾನ ತನಗೇ ಸಿಗಬೇಕಿತ್ತಲ್ಲಾ ಎಂದ ಅವರು, ಕೆ.ಪಿ. ಚಂದ್ರಕಲಾ ಅಭ್ಯರ್ಥಿ ಆಗಿರುವದು ಇದಕ್ಕೆ ಸಾಕ್ಷಿ ಎಂದರು. ತಾನು ಕೂಡಾ ಆಕಾಂಕ್ಷಿ ಆಗಿದ್ದರೂ ಚಂದ್ರಮೌಳಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಫೇಸ್ಬುಕ್ನಲ್ಲಿ ಬರೆದ ಬಗ್ಗೆ ತನಗೆ ಸೀಟು ಸಿಗದ ಬಗ್ಗೆ ತನ್ನ ಮಿತ್ರರು, ಅಭಿಮಾನಿಗಳು ಅತ್ತಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಭಾವುಕರಾಗಿ ನುಡಿದರು.
ತನ್ನ ವಿರುದ್ಧ ವಿನಾಕಾರಣ ಆಪಾದನೆ ಹೊರಿಸಿ, ಕೀಳು ರೀತಿ ಮಾತನಾಡಿರುವದು ತನಗೆ ಮತ್ತು ತನ್ನ ಅಭಿಮಾನಿಗಳಿಗೆ ನೋವಾಗಿದೆ ಎಂದ ಅವರು, ಈ ಬಗ್ಗೆ ಪಕ್ಷ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.