ಸೋಮವಾರಪೇಟೆ,ಏ.26: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಕೊಡಗಿನ ಅಭಿವೃದ್ಧಿ ಸಾಧ್ಯ. ಈಗಾಗಲೇ ಸರ್ಕಾರದ ಜನಪರ ಯೋಜನೆಗಳು ಪ್ರತಿಯೊಬ್ಬರ ಮನೆಗೂ ತಲುಪಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಲಯಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ ಕ್ಷೇತ್ರ ಬಡವಾಗಿದೆ ಎಂದರು.
ಕ್ಷೇತ್ರದ ಶಾಸಕರು 20 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ ಎಂದು ಹೇಳುತ್ತಾರೆ. ಚುನಾವಣೆಯ ನಂತರ ವಿಧಾನಸಭೆ ಯಲ್ಲಿ ಶಾಸಕರನ್ನು ಯಾವ ಪಕ್ಷದವರು ಎಂದು ಕೇಳುವದಿಲ್ಲ. ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುದಾನ ತರಬೇಕಿತ್ತು. ಇಂತಹ ಜವಾಬ್ದಾರಿಯಿಲ್ಲದ ಶಾಸಕರಿಂದ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳಷ್ಟು ಹಿನ್ನಡೆ ಸಾಧಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಇತ್ತೀಚೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಖ್ಯಮಂತ್ರಿ ಗಳ ವಿಶೇಷ ಪ್ಯಾಕೇಜ್ನಲ್ಲಿ ಬಹುತೇಕ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಆಗಿದೆ. ಟೆಂಡರ್ ಆಗಿರುವ ಉಳಿದ ರಸ್ತೆಗಳ ಕಾಮಗಾರಿಯೂ ನಡೆಯಲಿದೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿವೆ. ಜನರು ಕೂಡ ಕಾಂಗ್ರೆಸ್ ಪರವಾಗಿರುವದರಿಂದ ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವದು ನಮ್ಮೆಲ್ಲರ ಜವಾಬ್ದಾರಿ. ಪಕ್ಷದ ಅಭ್ಯರ್ಥಿ ಚಂದ್ರಕಲಾ ಅವರನ್ನು ಗೆಲ್ಲಿಸುವದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಪಕ್ಷ ಎಲ್ಲವನ್ನೂ ನೀಡಿದೆ. ಬಹತೇಕ ಕಾರ್ಯಕರ್ತರು ಅನೇಕ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಮುಂದೆಯೂ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ಥಾನಮಾನ ದೊರೆಯಲಿದೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸ ಬೇಕು ಎಂದು ಅಭಿಪ್ರಾಯಿಸಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಚಲನಚಿತ್ರ ನಟ ಜೈಜಗದೀಶ್, ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಹಾನಗಲ್ ಮಿಥುನ್, ಪ್ರಮುಖರಾದ ವಿ.ಎ. ಲಾರೆನ್ಸ್, ಬಿ.ಬಿ.ಸತೀಶ್, ಶೀಲಾ ಡಿಸೋಜ, ಕೆ.ಎ.ಆದಂ, ಮೀನಾ ಕುಮಾರಿ, ಟಿ.ಈ. ಸುರೇಶ್ ಮತ್ತಿತರರು ಇದ್ದರು.