ಕುಶಾಲನಗರ, ಏ. 26: ಕೊಡಗು ಜಿಲ್ಲೆಯ ಗಡಿಭಾಗಗಳ ಪ್ರಮುಖ ಸ್ಥಳಗಳಲ್ಲಿ ಚುನಾವಣಾ ಆಯೋಗ ನೀತಿ ಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ತಪಾಸಣಾ ಕಾರ್ಯಗಳನ್ನು ಕೈಗೊಂಡಿದೆ. ಕುಶಾಲನಗರ-ಕೊಪ್ಪ ಗಡಿಭಾಗ, ಸಂಪಾಜೆ ಸೇರಿದಂತೆ ಹಲವೆಡೆ ಸ್ಥಿರ ಕಣ್ಗಾವಲು ಪಡೆ ಕಾರ್ಯಾಚರಣೆಯನ್ನು ಸಿಸಿ ಕ್ಯಾಮೆರಾ ಮೂಲಕ ಸೆರೆಹಿಡಿದು ನೇರವಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ ಚೆಕ್ ಪೋಸ್ಟ್‍ನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಮೂರು ಪಾಳಿಗಳಲ್ಲಿ ದಿನದ 24 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನಗಳಲ್ಲಿ ನಗದು ಸಾಗಾಟ, ಮದ್ಯ ಸಾಗಾಟ ಮತ್ತಿತರ ಅಕ್ರಮ ಸಾಗಾಟಗಳನ್ನು ಪತ್ತೆಹಚ್ಚುವ ಕೆಲಸ ಮುಂದುವರೆದಿದೆ. ಕುಶಾಲನಗರ ಚೆಕ್ ಪೋಸ್ಟ್‍ಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಸದ್ಯದಲ್ಲಿಯೇ ನೆರೆ ರಾಜ್ಯದ ಹೆಚ್ಚುವರಿ ಪೊಲೀಸ್ ಪಡೆಗಳು ಆಗಮಿಸಲಿವೆ ಎಂದು ಮಾಹಿತಿ ಒದಗಿದೆ.