ಮಡಿಕೇರಿ, ಏ. 26: ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಹಂತದ ಅಧಿಕಾರಿಗಳು ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಮತ್ತು ಚುನಾವಣಾ ಆಯೋಗ ನಿರ್ದೇಶನವನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಚುನಾವಣಾ ಸಾಮಾನ್ಯ ವೀಕ್ಷಕ ಟಿ. ಶ್ರೀಕಾಂತ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಸಂಬಂಧ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ವಲ್ನರೆಬಲ್ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಬಂದೋಬಸ್ತ್ ಮಾಡುವದು. ಜೊತೆಗೆ ಹೋಂ ಗಾರ್ಡ್‍ಗಳನ್ನು ನಿಯೋಜಿಸುವದು, ಮತ್ತಿತರ ಸಂಬಂಧ ಹಲವು ಸಲಹೆ ನೀಡಿದರು.
ಈಗಾಗಲೇ 60 ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು,
ಮಿಂಚಿನ ನೋಂದಣಿಯಡಿ ಹೆಸರು ಸೇರ್ಪಡೆ ಮಾಡಿರುವ ಮತದಾರರಿಗೆ ಗುರುತಿನ ಚೀಟಿ ನೀಡುವದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹೇಳಿದರು.
ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ, ಅಬಕಾರಿ ಅಕ್ರಮಗಳನ್ನು ತಡೆಯುವದು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್‍ಗೆ ಸಿದ್ಧತೆ ಮಾಡಿಕೊಳ್ಳುವದು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವದು. ಮತ್ತಿತರ ಬಗ್ಗೆ ಗಮನ ಹರಿಸುವಂತೆ ಹೇಳಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ವಿಧಾನಸಭಾ ಚುನಾವಣೆ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ರಾಜೇಂದ್ರ ಪ್ರಸಾದ್ ವಲ್ನರೇಬಲ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಸ್ವೀಪ್ ಸಮಿತಿಯಿಂದ ಜಾಗೃತಿ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಚುನಾವಣಾಧಿಕಾರಿ ರಮೇಶ್ ಕೋನರೆಡ್ಡಿ, ರಾಜು ಹಾಗೂ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿ ಬಗ್ಗೆ ಮಾಹಿತಿ ನೀಡಿದರು.