ಮಡಿಕೇರಿ, ಏ. 26: ಕರ್ನಾಟಕ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾರ್ಚ್ ಕೊನೆಯಲ್ಲಿ ಚುನಾವಣಾ ನೀತಿ ಸಂಹಿತೆಯು ಜಾರಿಗೊಂಡಿರುವ ಬಳಿಕ, ಜಿಲ್ಲೆಯಲ್ಲಿ ಸುಮಾರು 170ಕ್ಕೂ ಅಧಿಕ ಪ್ರಕರಣಗಳು ಅಬ್ಕಾರಿ ಇಲಾಖೆಯಿಂದ ದಾಖಲಾಗಿವೆ. ಇದುವರೆಗೆ 8113 ಲೀಟರ್‍ನಷ್ಟು ನಿಯಮ ಉಲ್ಲಂಘನೆಯಡಿ ಮದ್ಯ ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ನಾಲ್ಕು ಚಕ್ರ ವಾಹನಗಳು ಎರಡು ಹಾಗೂ ಮತ್ತೆರಡು ದ್ವಿಚಕ್ರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮದ್ಯ ಹಾಗೂ ವಾಹನಗಳ ಒಟ್ಟು ಮೌಲ್ಯ 43.66 ಲಕ್ಷವೆಂದು ಅಬ್ಕಾರಿ ಇಲಾಖೆಯ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ.ಕಠಿಣ ಕ್ರಮ: ಪ್ರಸಕ್ತ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿ ರುವ ಸಾರ್ವಜನಿಕ ಸಮಾರಂಭಗಳು ಹಾಗೂ ಇತರ ಉತ್ಸವಗಳಿಗೆ ಸಂಬಂಧಿಸಿದಂತೆ ಮದ್ಯ ಇತ್ಯಾದಿ ಬಳಕೆಗೆ ಕಠಿಣ ಕ್ರಮಗಳನ್ನು ಅನುಸರಿ ಸಲಾಗುತ್ತಿದ್ದು, ಅವುಗಳಿಗೆ ವಿಧಿಸಿರುವ ಷರತ್ತುಗಳ ಉಲ್ಲಂಘನೆಯಡಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ‘ಶಕ್ತಿ’ ಸಂದರ್ಶನದಲ್ಲಿ ಉಪ ಆಯುಕ್ತ ಬಿ.ಎಲ್. ನಾಗೇಶ್ ಈ ಮಾಹಿತಿ ನೀಡಿದರು.

ಸಾಂದರ್ಭಿಕ ಸನ್ನದ್ದು: ಚುನಾವಣೆ ಘೋಷಣೆಯಾಗುವ ಮೊದಲೇ ಪೂರ್ವ ನಿಗದಿಗೊಂಡಿರುವ ಮದುವೆ ಇತ್ಯಾದಿ ಸಮಾರಂಭಗಳಿಗೆ ಕಾರ್ಯಕ್ರಮ ಸಂಘಟಕರು ಒಂದು ದಿನದ ಮಟ್ಟಿಗೆ ಮದ್ಯ ಬಳಕೆಗಾಗಿ ಸಾಂದರ್ಭಿಕ ಸನ್ನದ್ದು ಪಡೆಯಬೇಕಿದೆ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯ ಜನತೆ ಕಾನೂನಿನ ಅಡಿಯಲ್ಲಿ ಸ್ವಯಂ ಸ್ಪಂದಿಸುತ್ತಿದ್ದಾರೆ ಎಂದರು.

ಚುನಾವಣಾ ದಿನ : ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ಚುನಾವಣಾ ದಿನಾಂಕ ಮೇ 12ರಂದು ಸುಮಾರು 24 ಗಂಟೆಗಳ ಮುನ್ನವೇ, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮದ್ಯ ಮಾರಾಟ ನಿರ್ಬಂಧ ಜಾರಿಗೊಳ್ಳಲಿದೆ ಎಂದು ನೆನಪಿಸಿದ ಅವರು, ಈಗಾಗಲೇ ಅನೇಕರು ಮೇ 12ರಂದು ವಿವಾಹ ಏರ್ಪಡಿಸಿ ಕೊಂಡಿದ್ದಾಗಿ ಉಲ್ಲೇಖಿಸಿದರು. ಹೀಗಾಗಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಯಾಗಿರುವ ಪಿ.ಐ. ಶ್ರೀವಿದ್ಯಾ ಅವರು ಅಬ್ಕಾರಿ ಇಲಾಖೆಗೆ ನಿರ್ದೇಶನದೊಂದಿಗೆ ಸಮಾರಂಭ ಗಳಿಗೆ ಅಡ್ಡಿಯಾಗದಂತೆ ನಿಗಾ ವಹಿಸಲು ಸೂಚಿಸಿದ್ದಾರೆ ಎಂದರು.

ಅಂತಹ ಸಂದರ್ಭ ಕಾನೂನು ಉಲ್ಲಂಘನೆಯಾಗದಂತೆ ಸಾಂದರ್ಭಿಕ ಸನ್ನದ್ದು ಅಡಿಯಲ್ಲಿ ರೂ. 11,500 ಮೊತ್ತ ಪಾವತಿಸಿ ಒಂದು ದಿನ ಮಟ್ಟಿಗೆ ಸಮಾರಂಭ ಆಯೋಜಕರಿಗೆ ಷರತ್ತುಬದ್ಧ ಅನುಮತಿ ಕಲ್ಪಿಸಲಾಗು ವದು ಎಂದು ನೆನಪಿಸಿದರು.

ಈಗಾಗಲೇ ಸುಮಾರು 40ರಷ್ಟು ವಿವಾಹಗಳಿಗೆ ಸ್ವಯಂಪ್ರೇರಿತರಾಗಿ ಅನುಮತಿ ಪಡೆದುಕೊಂಡಿದ್ದಾಗಿ ಬೊಟ್ಟು ಮಾಡಿದ ಅಧಿಕಾರಿ ನಾಗೇಶ, ಕೊಡಗಿನ ಜನತೆ ಕಾನೂನು ಗೌರವಿಸಿ ತಾತ್ಕಾಲಿಕ ಸನ್ನದ್ದು ಹೊಂದಿಕೊಳ್ಳುತ್ತಿ ರುವದು ಅಭಿನಂದನೀಯ ಬೆಳವಣಿಗೆಯಾಗಿದೆ ಎಂದರು.

ಈ ನಡುವೆಯೂ ಜಿಲ್ಲೆಯ ಗಡಿ ತಪಾಸಣಾ ಗೇಟ್‍ಗಳ ಸಹಿತ ಅಂತರ್ರಾಜ್ಯ ಗಡಿಗಳಿಂದ ಮದ್ಯನೀತಿ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿರುವ ಕಾರಣ ಅಪರಾಧಗಳು ಇಳಿಮುಖಗೊಂಡಿವೆ ಎಂದು ಬೊಟ್ಟು ಮಾಡಿದರು.

ಪ್ರಸಕ್ತ ಜಿಲ್ಲೆಯಲ್ಲಿ ಚುನಾವಣಾ ಸಂಹಿತೆಯಡಿ ಅಬ್ಕಾರಿ ಇಲಾಖೆ ಯಿಂದ ಕಟ್ಟುನಿಟ್ಟು ಜಾರಿಯೊಂದಿಗೆ, ಅತ್ಯಧಿಕ ತಾತ್ಕಾಲಿಕ ಪರವಾನಗಿ ಹಾಗೂ ನಿಯಮ ಉಲ್ಲಂಘನೆ ಸಂಬಂಧ ಕ್ರಮ ಜರುಗಿಸಿ, ಸರಕಾರದ ಬೊಕ್ಕಸಕ್ಕೆ ದಂಡ ರೂಪದಲ್ಲಿ ಆದಾಯ ಹೆಚ್ಚಿಸಿದ್ದಾಗಿದೆ ಎಂದು ಅಂಕಿ ಅಂಶ ನೀಡಿದರು.

ಚುನಾವಣೆಯ ಸಂದರ್ಭ ಇನ್ನಷ್ಟು ಪರಿಣಾಮಕಾರಿ ಕ್ರಮದೊಂದಿಗೆ, ಕೊಡಗಿನ ಜನತೆ ಮಾದರಿ ಚುನಾವಣೆ ಎದುರಿಸಲು ಹಾಗೂ ಶಾಂತಿ ಕಾಪಾಡಲು ಅಬ್ಕಾರಿ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಸಲಹೆ ನೀಡಿದರು.