ಕೂಡಿಗೆ, ಏ. 26: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮುಂಭಾಗ ದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಕಾವೇರಿ ನದಿಯಿಂದ ಮತ್ತೊಮ್ಮೆ ನೂತನವಾಗಿ ಪೈಪ್ಲೈನ್ ಅಳವಡಿಸಿ ನೀರೊದಗಿಸಲಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತೆಗೆದ ಬೋರ್ವೆಲ್ನಲ್ಲಿ ಶುದ್ಧೀಕರಣವಾಗದಂತಹ ನೀರು ಬರುತ್ತಿದ್ದರಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ರೂ. 2 ಲಕ್ಷ ವೆಚ್ಚದಲ್ಲಿ ಕಾವೇರಿ ನದಿಯಿಂದ ಪೈಪ್ಲೈನ್ ಅಳವಡಿಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರೊದಗಿಸಲಾಗುತ್ತಿತ್ತು.
ಆದರೆ, ಪೈಪ್ಲೈನ್ ಅಳವಡಿಸಿದ ಮೂರು ದಿನಗಳಲ್ಲೇ ಕಿಡಿಗೇಡಿಗಳು ನೀರೆತ್ತುವ ಯಂತ್ರಕ್ಕೆ ಅಳವಡಿಸಿದ್ದ ವಿದ್ಯುತ್ ಕೇಬಲ್ ಅನ್ನು ಕಳವು ಮಾಡಿದ್ದರು. ಮತ್ತೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸ್ಥಗಿತಗೊಂಡಿತ್ತು.
ಈ ಹಿನ್ನೆಲೆ ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಮತ್ತೊಮ್ಮೆ ರೂ. 2 ಲಕ್ಷ ವಿದ್ಯುತ್ ಕೇಬಲ್ ಹಾಗೂ ಪೈಪ್ಗಳನ್ನು ಅಳವಡಿಸಿದ್ದು, ಈ ವ್ಯಾಪ್ತಿಯ ಸಾರ್ವಜನಿಕರು ನೀರಿನ ಸೌಲಭ್ಯವನ್ನು ಪಡೆಯಬೇಕು ಎಂದು ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.