ಮಡಿಕೇರಿ, ಏ.26: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಕೆಲವೊಂದು ನಿರ್ಬಂಧಗ ಳೊಂದಿಗೆ ತಮ್ಮ ನಾಮಪತ್ರವನ್ನು ಹಿಂತೆಗೆಯುವ ಸಾಧ್ಯತೆಯಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ತಾ. 27 (ಇಂದು) ಕೊನೆಯ ದಿನಾಂಕವಾಗಿದ್ದು ಈ ಬೆಳವಣಿಗೆ ಕಂಡುಬಂದಿದೆ.ಮುಖ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಬಹುಮತ ಸಾಧಿಸಿ ಮತ್ತೆ ಆಡಳಿತ ಚುಕ್ಕಾಣಿ ಹಿಡಿದರೆ ಈಗ ಕೊಡಗಿನಲ್ಲಿ ಬಹುಮತದ ಬೇಡಿಕೆಯಿರುವ ಪೊನ್ನಂಪೇಟೆ ಹಾಗೂ ಕುಶಾಲನಗರ ಹೊಸ ತಾಲೂಕುಗಳ ರಚನೆಗೆ ಸರಕಾರ ಸಮ್ಮತಿ ನೀಡಬೇಕು. ಕೊಡಗಿನ ಜನರು ಮುಖ್ಯವಾಗಿ ಜಿಲ್ಲೆಯ ರಸ್ತೆ ದುರವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕನಿಷ್ಟ ರೂ. 50 ಕೋಟಿಯನ್ನು ಕೊಡಗಿನ ರಸ್ತೆಗಳ ನಿರ್ವಹಣೆಗೆ ಪ್ಯಾಕೇಜಾಗಿ ಸರಕಾರ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದು ಪಕ್ಷದ ವರಿಷ್ಠರು ಇದಕ್ಕೆ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ತಾ. 27 ರಂದು ಈ ಬಗ್ಗೆ ಖಚಿತವಾದೊಡನೆ ತನ್ನ ನಾಮಪತ್ರವನ್ನು ಹಿಂತೆಗೆದುಕೊಳ್ಳಲಿರುವದಾಗಿ ಹರೀಶ್ ಬೋಪಣ್ಣ “ಶಕ್ತಿ” ಯೊಂದಿಗೆ ಮುಕ್ತ ನುಡಿಯಾಡಿದ್ದಾರೆ.