ಭಾಗಮಂಡಲ, ಏ. 26: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಆದೇಶದಂತೆ ಸರಕಾರಿ ಇಲಾಖೆಗಳಾದ ಪೊಲೀಸ್, ಕಂದಾಯ, ಅರಣ್ಯ, ಆರೋಗ್ಯ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಚೆಸ್ಕಾಂ, ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸ್ವ ಸಹಾಯ ಸಂಘ, ಜೇನು ಕೃಷಿಕರ ಸಹಕಾರ ಸಂಘ, ತಾಂತ್ರಿಕ ತರಬೇತಿ ಸಂಸ್ಥೆ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಆಯಾ ಕ್ಷೇತ್ರದ ಮತದಾರರು ಸೇರಿದಂತೆ 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮತದಾರರ ಗಮನ ಸೆಳೆಯುವ ಸಲುವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಬ್ಯಾಂಡ್ ಬಾರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಠಾಣಾಧಿಕಾರಿ ಪುಟ್ಟರಾಜಯ್ಯ ಮತ್ತು ಸಿಬ್ಬಂದಿ, ವಲಯ ಅರಣ್ಯಾಧಿಕಾರಿ ಚಂಗಪ್ಪ ಮತ್ತು ಸಿಬ್ಬಂದಿ, ಚೆಸ್ಕಾಂ ಅಭಿಯಂತರರಾದ ಹರಿಣಿ ಮತ್ತು ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕಿ ಕಲಾವತಿ ಉಪಸ್ಥಿತರಿದ್ದರು.