ಮಡಿಕೇರಿ, ಏ. 26: ನಗರದ ಕರ್ಣಗೇರಿ ಕ್ಷೇತ್ರ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ 1 ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ಧರ್ಮದರ್ಶಿಗಳಾದ ಗೋವಿಂದಸ್ವಾಮಿ ತಾ. 30 ರಂದು ಸಂಜೆ 6.30ಕ್ಕೆ ವೆಂಕಟರಮಣ ಸ್ವಾಮಿಯ ಹರಿಸೇವೆಯೊಂದಿಗೆ ಜಾತ್ರೋತ್ಸವ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಮೇ 1 ರಂದು ಬೆಳಗ್ಗೆ 6 ಗಂಟೆಗೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ 6.30ಕ್ಕೆ ಗಣಪತಿ ಹೋಮ ನಡೆಯಲಿದೆ. ಬೆಳಗ್ಗೆ 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥಸ್ನಾನ, ಕಳಸ ಪೂಜೆ, ನೈವೇದ್ಯ ಪ್ರಸಾದ, ಮಹಾ ಮಂಗಳಾರತಿ, 11.45ಕ್ಕೆ ದೇವಿಯ ರಥೋತ್ಸವ ಜರುಗಲಿದೆÉ ಎಂದರು.

ಮಧ್ಯಾಹ್ನ 12 ಗಂಟೆಗೆ ಅನ್ನದಾನ ನಡೆಯಲಿದ್ದು, 12.30ಕ್ಕೆ ತಾಯಿಯ ದರ್ಶನ ನೀಡಲಾಗುವದು. ಸಂಜೆ 6 ಗಂಟೆಗೆ ದೇವಾಲಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ನಡೆಯಲಿದ್ದು, ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಗೋವಿಂದಸ್ವಾಮಿ ತಿಳಿಸಿದರು.

ದೇವಾಲಯದಲ್ಲಿ ಶ್ರೀ ವೆಂಕಟರಮಣ ದೇವರ ಕಲ್ಲಿನ ಮೂರ್ತಿ ನಿರ್ಮಾಣಗೊಳ್ಳುತ್ತಿದ್ದು, 2, 3 ತಿಂಗಳೊಳಗೆ ಅನಾವರಣ ಗೊಳ್ಳಲಿದೆ. ದೇವರ ವಿಗ್ರಹ ಮೂರೂವರೆ ಅಡಿ ಎತ್ತರವಿದ್ದು, ಖ್ಯಾತ ಶಿಲ್ಪಿಗಳಾದ ಕಾರ್ಕಳದ ನಿತ್ಯಾನಂದ ಕೆತ್ತನೆ ಕೆಲಸ ಮಾಡುತ್ತಿದ್ದಾರೆ. ರಥವನ್ನು ಕಾರ್ಕಳದ ವಿನೋದ್ ಅವರು ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯದ ಸದಸ್ಯರುಗಳಾದ ವಿ.ಎಸ್. ಸತೀಶ್, ವಿ. ಸಚಿನ್ ವಾಸುದೇವ್, ಜಿ. ಕಿರಣ್ ಹಾಗೂ ಸೂದನ ಹರೀಶ್ ಉಪಸ್ಥಿತರಿದ್ದರು.