ಮಡಿಕೇರಿ, ಏ. 26: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಬಂಧ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿರುವ 24 ಮಂದಿಯ ಪೈಕಿ ಇಂದು ಯಾರೊಬ್ಬರೂ ಕಣದಿಂದ ಹಿಂದೆ ಸರಿಯದಿರುವ ಬೆಳವಣಿಗೆ ಕಂಡುಬಂದಿದೆ.ಬಿಜೆಪಿ ಹಾಗೂ ಜೆಡಿಎಸ್ಹೊ ರತುಪಡಿಸಿದಂತೆ ಪ್ರಮುಖವಾಗಿರುವ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‍ನ ಮೂವರು ಬಂಡಾಯ ಅಭ್ಯರ್ಥಿಗಳು ಕೂಡ ಇಂದು ನಾಮಪತ್ರ ಹಿಂಪಡೆಯದೆ ಕಾದುನೋಡುವ ತಂತ್ರ ಅನುಸರಿಸಿದ್ದಾರೆ.ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯವಾಗಿ ಕಾಂಗ್ರೆಸ್ ವಿರುದ್ಧ ಪಕ್ಷೇತರರಾಗಿ ಕಣದಲ್ಲಿರುವ ನಾಪಂಡ ಎಂ. ಮುತ್ತಪ್ಪ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಕದ್ದಣಿಯಂಡ ಹರೀಶ್ ಬೋಪಣ್ಣ ಮತ್ತು ಪದ್ಮಿನಿ ಪೊನ್ನಪ್ಪ ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿದಿಲ್ಲ. ಉಳಿದಂತೆ ವಿವಿಧ ಪಕ್ಷಗಳ ಹೆಸರಿನಲ್ಲಿ ಪಕ್ಷೇತರರಾಗಿದ್ದು, ಉಮೇದುವಾರಿಕೆ ಸಲ್ಲಿಸಿರುವ ಇತರ 15 ಮಂದಿ ಅಭ್ಯರ್ಥಿಗಳಲ್ಲಿ ಯಾರೂ ಕೂಡ ಇಂದು ಅಂತಿಮ ಕ್ಷಣದವರೆಗೆ ನಾಮಪತ್ರ ಹಿಂಪಡೆಯದೆ ಉಳಿಸಿಕೊಂಡಿದ್ದಾರೆ.

ಇಂದು ಅಂತ್ಯ: ನಾಮಪತ್ರ ಹಿಂಪಡೆಯಲು ತಾ. 27ರಂದು (ಇಂದು) ಅಂತಿಮ ದಿನವಾಗಿದ್ದು, ಸಂಜೆ 3 ಗಂಟೆಯೊಳಗೆ ವಾಪಸಾತಿಗೆ ಕಾಲಾವಕಾಶವಿದೆ.

ಮುಂದುವರಿದ ಸಂಧಾನ: ಈ ನಡುವೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನಿಂದ ಬಂಡಾಯವೆದ್ದು ಉಮೇದುವಾರಿಕೆ ಸಲ್ಲಿಸಿರುವ ನಾಪಂಡ ಮುತ್ತಪ್ಪ, ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಮಾಂಗೇರ ಪದ್ಮಿನಿ ಪೊನ್ನಪ್ಪ ಇವರುಗಳ ಮನವೊಲಿಸಲು ಕಾಂಗ್ರೆಸ್ ವರಿಷ್ಠರು

(ಮೊದಲ ಪುಟದಿಂದ) ಸಂಧಾನ ಮಾತುಕತೆ ಮುಂದುವರಿಸಿದ್ದಾರೆ.

ಇದುವರೆಗೆ ಮಾತುಕತೆ ಫಲಿಸದೆ ಇರುವದರಿಂದ, ನಾಮಪತ್ರ ಹಿಂಪಡೆಯಲು ಕಾಲಾವಕಾಶವಿರುವ ಕೊನೆಯ ಘಳಿಗೆ ತನಕವೂ ಈ ಮೂವರು ಕೂಡ ವರಿಷ್ಠರ ನಿಲುವಿಗಾಗಿ ಅಪೇಕ್ಷೆ ಹೊಂದಿರುವರೆನ್ನಲಾಗಿದೆ.

ರಾತ್ರಿ ಮಾತುಕತೆ?

ತಾ. 27ರಂದು (ಇಂದು) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲಾ ಭೇಟಿ ಹಿನ್ನೆಲೆ, ಅನೇಕ ಕೆಪಿಸಿಸಿ ಪ್ರಮುಖರು ಈ ರಾತ್ರಿ ಕೊಡಗಿಗೆ ಬರಲಿದ್ದು, ಬಂಡಾಯ ಅಭ್ಯರ್ಥಿಗಳ ಸಹಿತ ಅತೃಪ್ತ ಕಾಂಗ್ರೆಸ್ಸಿಗರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.