ಮಡಿಕೇರಿ, ಏ. 26: ಚುನಾವಣೆ ಹತ್ತಿರ ಬಂದರೂ ಕಾಂಗ್ರೆಸ್ ಪಾಳಯದಲ್ಲಿ ಇನ್ನೂ ಕೂಡ ಅಸಮಾಧಾನ ಹೊಗೆಯಾಡುತ್ತಲೇ ಇರುವದು ತೆರೆದ ಕನ್ನಡಿಯಷ್ಟೇ ಸತ್ಯ.ಬಂಡಾಯ, ಅಸಮಾಧಾನಗಳ ನಡುವೆ ಎದುರಾಗುತ್ತಿರುವ ಚುನಾವಣೆ ಎದುರಿಸಲು ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಸಂಬಂಧ ಕಾರ್ಯಕ್ರಮ ಆಯೋಜನೆ, ಜನ ಸಂಘಟಿಸುವ ಬಗ್ಗೆ ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಶಿವುಮಾದಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.ಸಭೆಯಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಚಂದ್ರಕಲಾ ಅವರಿಗೆ ಅಧ್ಯಕ್ಷರು ‘ತಾವು ಅಭ್ಯರ್ಥಿಯಾಗಿರುವದರಿಂದ ತಮಗೂ ಜವಾಬ್ದಾರಿ ಇದೆ. ತಾವು ಸಾಧ್ಯವಾದಷ್ಟು ಕಾರ್ಯಕರ್ತರನ್ನು ಕರೆ ತರುವ ವ್ಯವಸ್ಥೆ ಮಾಡಬೇಕು’ ಎಂದು ಕೋರಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಚಂದ್ರಕಲಾ ಅವರು ‘ರಾಹುಲ್ ಗಾಂಧಿಯವರು ಗೋಣಿಕೊಪ್ಪಕ್ಕೆ ಬಂದರೆ ವೀರಾಜಪೇಟೆ ಅಭ್ಯರ್ಥಿಗೆ ಲಾಭ, ನನಗೇನು ಲಾಭವಿದೆ; ನಾನ್ಯಾಕೆ ಖರ್ಚು ಮಾಡಬೇಕು’ ಎಂದು ಹೇಳಿ ಹೊರ ನಡೆದರಂತೆ. ಇದರಿಂದ ಅಸಮಾಧಾನಿತರಾದ ಕೈ ಪಾಳಯದವರು ‘ಹೀಗಾದರೆ ಹೇಗೆ...?’ ಎಂದು ತಮ್ಮ ತಮ್ಮ ಕೈಗಳನ್ನು ತಾವೇ ಹಿಸುಕಿಕೊಂಡರಂತೆ...!