ಮಡಿಕೇರಿ, ಏ. 26: ಇಲ್ಲಿನ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಇಂದು ಪೊಲೀಸ್ ಇಲಾಖೆಯ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಕಾರಾಗೃಹದೊಳಗೆ ವಿಚಾರಣಾ ಬಂಧಿಗಳಿಂದ ಹಾಗೂ ಇತರ ಶಿಕ್ಷಾರ್ಹ ಖೈದಿಗಳಿಂದ ಯಾವದೇ ಕಾನೂನು ಬಾಹಿರ ಕೃತ್ಯಗಳಿಗೆ ಅವಕಾಶವಾಗದಂತೆ ಪೊಲೀಸ್ ಅಧಿಕಾರಿಗಳು ಕಾರಾಗೃಹ ಅಧೀಕ್ಷಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತಪಾಸಣೆ ನಡೆಸಿದರು.
ಈ ವೇಳೆ ಯಾವದೇ ಕಾನೂನು ಬಾಹಿರ ಸಂಗತಿಗಳು ಬೆಳಕಿಗೆ ಬಂದಿಲ್ಲವೆಂದು, ಕೊಡಗಿನಲ್ಲಿರುವ ಬಂದಿಗಳು ಸನ್ನಡತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಖೈದಿ ಸಾವು: ಬಾಳೆಲೆ ದೇವನೂರು ಗ್ರಾಮದ ಪಂಜೆರಿ ಎರವರ ಮುತ್ತ (32) ಎಂಬ ವಿಚಾರಣಾಧೀನ ಖೈದಿ ನಿನ್ನೆ ಎದೆನೋವು ಕಾಣಿಸಿಕೊಂಡು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈತನ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಬಂಧುಗಳಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.