ಕೂಡಿಗೆ, ಏ. 26: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾಶಾಲೆ ಮತ್ತು ನಿಲಯಕ್ಕೆ ಕಿರಿಯ ಬಾಲಕ ಮತ್ತು ಬಾಲಕಿಯರಿಗಾಗಿ ರಾಜ್ಯಮಟ್ಟದಲ್ಲಿ ಪ್ರವೇಶ ಆಯ್ಕೆ ಪರಿಶೀಲನಾ ತರಬೇತಿ ಶಿಬಿರವು ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯ ಆವರಣದಲ್ಲಿ ನಡೆಯಿತು.

ರಾಜ್ಯದಲ್ಲಿರುವ ಎರಡು ಕ್ರೀಡಾ ಪ್ರೌಢಶಾಲೆಗಳಾದ ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆ ಮತ್ತು ಬೆಂಗಳೂರಿನ ವಿದ್ಯಾನಗರದಲ್ಲಿನ ಕ್ರೀಡಾ ಪ್ರೌಢಶಾಲೆಗೆ 8ನೇ ತರಗತಿಗೆ ಕಿರಿಯ ಬಾಲಕ ಮತ್ತು ಬಾಲಕಿಯರ ಪ್ರವೇಶ ಆಯ್ಕೆ ಪರಿಶೀಲನಾ ತರಬೇತಿ ಶಿಬಿರವು ತಾಲೂಕು, ಜಿಲ್ಲೆ, ಹಾಗೂ ವಿಭಾಗ ಮಟ್ಟದಲ್ಲಿ ನಡೆದು ಇದೀಗ ಕೊನೆಯ ಹಂತವಾಗಿ ಕೂಡಿಗೆಯಲ್ಲಿ ತಾ.19 ರಿಂದ ಪ್ರಾರಂಭವಾಗಿದ್ದು ತಾ.27ರವರೆಗೆ ನಡೆಯಲಿದೆ.

ಶಿಬಿರದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹಾಕಿ, ವಾಲಿಬಾಲ್ ಕ್ರೀಡೆಗಳಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ 135 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. 78 ಬಾಲಕರು ಮತ್ತು 46 ಬಾಲಕಿಯರಿಗೆ ವಿವಿಧ ಕ್ರೀಡೆಗಳಿಗೆ ರಾಜ್ಯಮಟ್ಟದ ನುರಿತ 20 ಕ್ರೀಡಾ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.