ಚೆಟ್ಟಳ್ಳಿ, ಏ. 26: ಹೊಸ್ಕೇರಿ ಗ್ರಾಮಕ್ಕೆ ಒಳಪಡುವ ಚಿಲಿಪಿಲಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸುತಿದ್ದ ರವಿಕುಮಾರ್ ಎಂಬ ಅರ್ಚಕ ಸಂಶಯಾಸ್ಪದ ಸಾವನಪ್ಪಿದ ಘಟನೆ ನಡೆದಿದೆ. ಅಮ್ಮತಿ ಕಾವಾಡಿ ಮೂಲದ 43 ವರ್ಷದ ರವಿಕುಮಾರ್ ಎಂಬವರು ಸುಮಾರು 2ವರ್ಷಗಳಿಂದ ಚೆಟ್ಟಳ್ಳಿ ಪೋಲೀಸ್ ಉಪಠಾಣೆ ವ್ಯಾಪ್ತಿಯ ಶತಮಾನಗಳ ಇತಿಹಾಸ ಹೊಂದಿರುವ ಕಲ್ಲಿನ ಗುಹೆ ಒಳಗಿನ ಉದ್ಬವ ಕಲ್ಲಿನ ಶಿವಲಿಂಗದ ಚಿಲಿಪಿಲಿ ದೇವಾಯದಲ್ಲಿ ಅರ್ಚಕರಾಗಿ ದೇವಾಲಯಕ್ಕೆ ಸಂಬಂದಿಸಿದ ಮನೆಯಲ್ಲೆ ಇದ್ದು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದರು.ಕಳೆದ ಸುಮಾರು 15ದಿನ ಗಳಿಂದ ಅರ್ಚಕ ರವಿಕುಮಾರ್ ಸುಳಿವಿಲ್ಲದರಿಂದ ಅವರ ತಮ್ಮ ಮನೋಹರ್ ಮಡಿಕೇರಿ ಗ್ರಾಮಾಂತರ ಠಾಣೆ ದೂರು ನೀಡಿದ. ದೇವಾಲಯಕ್ಕೆ ಅರ್ಚಕರಿಲ್ಲದ್ದರಿಂದ ದೇವಾಲಯ ಸಮಿತಿಯವರು ಅರ್ಚಕರು ಬೇಕೆಂದು ಜಾಹಿರಾತು ನೀಡಿರುವ ಬಗ್ಗೆ ದೇವಾಲಯ ಸಮಿತಿಯ ಕಾರ್ಯದರ್ಶಿ ಬಲ್ಲಚಂಡ ವಿಠಲಕಾರ್ಯಪ್ಪ ಹೇಳುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಸಮೀಪದ ಬೆಲ್ಸ್ ಕಾಫಿ ತೋಟದಲ್ಲಿ ಕಾರ್ಮಿಕರು ತೆರಳುತಿದ್ದಾಗ ವಿಪರೀತ ದುರ್ವಾಸನೆ ಬರುತಿದ್ದ ಕಡೆ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಈ ಬಗ್ಗೆ ಪರಿಶೀಲಿಸಿ ಮಡಿಕೇರಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಲಾಗಿತ್ತು.
(ಮೊದಲ ಪುಟದಿಂದ) ಸಹೋದರ ಮನೋಹರ್ ಬಿಳಿಶರ್ಟನ್ನು ಪತ್ತೆಹಚ್ಚಿ ರವಿಕುಮಾರ್ ಎಂದು ಗುರುತಿಸಿದ. ಎಎಸ್ಪಿ ಯತೀಶ್ ಕುಮಾರ್, ಎಸ್ಐ ಚೇತನ್, ಎಎಸ್ಐ ವೆಂಕಟರಮಣ, ಹೆಡ್ಕಾನ್ಸ್ಟೇಬಲ್ ಪ್ರಕಾಶ್ ಸಿಬ್ಬಂದಿ ಸಜನ್ ಸ್ಥಳ ಮಹಜರು ನಡೆಸಿದರು. ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಒಪ್ಪಿಸಲಾಯಿತು.
ದೇವಾಲಯದ ಅರ್ಚಕರ ಮನೆಯಲ್ಲಿ ರವಿಕುಮಾರ್ ಒಬ್ಬನೇ ವಾಸವಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು ಕೆಲವು ಸಮಯದಿಂದ ಮಾನಸಿಕ ತೊಂದರೆಗೆ ಒಳಗಾದವನಂತೆ ಕಾಣುತಿದ್ದ ಬಗ್ಗೆ ಊರಿನವರು ಹೇಳುತ್ತಾರೆ. ಮೃತದೇಹ ಕೊಳೆತು ರುಂಡ ಮುಂಡ ಬೇರೆಯಾದ್ದರಿಂದ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯುವದೆಂದು ಪೋಲಿಸ್ ಮೂಲಗಳು ತಿಳಿಸಿವೆ.
-ಕರುಣ್ ಕಾಳಯ್ಯ