ಸಿದ್ದಾಪುರ, ಏ. 26: ಕಾರ್ಮಿಕರು ಹಾಗೂ ರೈತರು ಜೆಡಿಎಸ್ ಪಕ್ಷದತ್ತ ಒಲವು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವದು ಖಚಿತವೆಂದು ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಸಮೀಪದ ಎಮ್ಮೆಗುಂಡಿ ಕಾಫಿ ತೋಟದ ಲೈನ್ ಮನೆಗಳಿಗೆ ತೆರಳಿ ಮತಯಾಚಿಸಿ ಬಳಿಕ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾರ್ಮಿಕರಿಗೆ - ರೈತರಿಗೆ ವಿವಿಧ ರೀತಿಯ ಉತ್ತಮ ಯೋಜನೆಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಜನಪರ ಯೋಜನೆ ಗಮನಿಸಿದ ಕಾರ್ಮಿಕರು, ರೈತರು ಜೆಡಿಎಸ್ ಪಕ್ಷದ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯ 2 ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಪಕ್ಷದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2 ರಾಜಕೀಯ ಪಕ್ಷಗಳ ಬಗ್ಗೆ ಮತದಾರರಿಗೆ ಆಸಕ್ತಿ ಇಲ್ಲದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡಿರುವ ಸಿದ್ದಾಪುರದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಲಕ್ಷ್ಮಿ ಹಾಗೂ ರಾಧ ಅವರು ಸಂಕೇತ್ ಅವರೊಂದಿಗೆ ತಮ್ಮ ಭಾಗದ ಸಮಸ್ಯೆಗಳನ್ನು ಬಿಚ್ಚಿಟ್ಟರು. ತಾವುಗಳು ಪಂಚಾಯಿತಿ ಸದಸ್ಯರು ಗಳಾಗಿದ್ದರೂ ಕೂಡ ತಾಲೂಕು ಕಚೇರಿ ಇನ್ನಿತರ ಕಚೇರಿಗಳಿಗೆ ತೆರಳಿದರೆ ಗೌರವ ನೀಡುತ್ತಿಲ್ಲ, ಯಾವದೇ ಇಲಾಖೆಗಳು ಸ್ಪಂದಿಸುತ್ತಿಲ್ಲ. ಸರ್ಕಾರಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.
ಗೋಣಿಕೊಪ್ಪಲು: ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಳತ್ಮಾಡುವಿನಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
ಗ್ರಾಮದಲ್ಲಿರುವ ಸಮಸ್ಯೆಗಳನ್ನು ಮತದಾರರಿಂದ ಆಲಿಸುತ್ತಿರುವ ಸಂಕೇತ್ ಪೂವಯ್ಯ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಕ್ಷೇತ್ರ ಅಧ್ಯಕ್ಷ ಎಸ್. ಎಚ್. ಮತೀನ್ ಕಾರ್ಮಿಕ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಮುಖಂಡರಾದ ಕತ್ರಿಕೊಲ್ಲಿ ವಿಜು, ರಘು, ಕೃಷ್ಣಮೂರ್ತಿ, ಕಾಯರತೊಡಿ ಮಧು, ಕುಮಾರ, ಹರೀಶ್, ವೆಂಕಟೇಶ್, ಬಾರಿಕೆ ವಿಕ್ಕಿ, ಪೊನ್ನಚ್ಚನ ಮಣಿ, ಮಹೇಶ್, ಜಗ್ಗ, ಲವ, ಸಚಿನ್ ಮುಂತಾದವರು ಹಾಜರಿದ್ದರು.