ಮಡಿಕೇರಿ, ಏ. 26: ಜಿಲ್ಲೆಯ ಗಡಿ ಗ್ರಾಮ ಚೆಂಬು ಬಳಿ ದಬ್ಬಡ್ಕಕ್ಕೆ ತೆರಳಲು ರಸ್ತೆಯಿಲ್ಲವೆಂದು ಅಲ್ಲಿನ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿದು ಮತದಾನಕ್ಕೆ ಸಮ್ಮತಿಸಿದ್ದಾರೆ.

ಈ ಸಂಬಂಧ ತಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡದಿದ್ದರೆ ಚುನಾವಣೆ ಬಹಿಷ್ಕರಿಸುವದಾಗಿ ಗ್ರಾಮಸ್ಥರು ಘೋಷಿಸಿದ್ದರು. ವಿಷಯ ತಿಳಿದ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಸ್.ಕೆ. ಶಾರದಾಂಬ ಹಾಗೂ ಇತರ ಅಧಿಕಾರಿಗಳ ತಂಡ ತೆರಳಿ ಗ್ರಾಮಸ್ಥರ ಮನವೊಲಿಸಿದ್ದಾರೆ.

ಅಲ್ಲದೆ ಚುನಾವಣೆಯಲ್ಲಿ ಮತದಾನ ಮಾಡುವದು ಪ್ರತಿಯೊಬ್ಬರ ಹಕ್ಕು ಎಂದು ನೆನಪಿಸಿ, ಚುನಾವಣೆ ಬಳಿಕ ಜಿಲ್ಲಾಡಳಿತ ರಸ್ತೆ ವ್ಯವಸ್ಥೆ ರೂಪಿಸಿಕೊಡುವದಾಗಿ ನೀಡಿರುವ ಭರವಸೆ ಮೇರೆಗೆ ಮತದಾನಕ್ಕೆ ಸಮ್ಮತಿಸಿದ್ದಾರೆ ಎಂದು ತಹಶೀಲ್ದಾರರು ಖಾತರಿಪಡಿಸಿದ್ದಾರೆ.