ಮಡಿಕೇರಿ, ಏ. 26: ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ವಿರೋಧ ವ್ಯಕ್ತಪಡಿಸಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರು ನಾಮಪತ್ರ ಹಿಂಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರು ಈ ಕುರಿತು ಬಂಡಾಯ ಸ್ಪರ್ಧಿಗಳೊಂದಿಗೆ ಚರ್ಚಿಸಿರುವದಾಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸ್ಪರ್ಧಿಗಳು ಮುಂದಿಟ್ಟಿರುವ ಬೇಡಿಕೆಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಸ್ಪರ್ಧಿಗಳು ನಾಮಪತ್ರ ಹಿಂಪಡೆಯಲಿದ್ದಾರೆ. ಈ ಕುರಿತು ಅವರಲ್ಲಿ ಮನವಿಯನ್ನೂ ಮಾಡಲಾಗುವದು ಎಂದು ಶಿವು ಮಾದಪ್ಪ ತಿಳಿಸಿದ್ದಾರೆ.