ಕೂಡಿಗೆ, ಏ. 26: ಮಡಿಕೇರಿ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವ ನಾಪಂಡ ಮುತ್ತಪ್ಪ ಬಂಡಾಯ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲಿದ್ದಾರೆಂದು ತಿಳಿದು ಬಂದಿದೆ.ಮುತ್ತಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ವರಿಷ್ಠರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆ ಮುತ್ತಪ್ಪ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದು, ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ನಿರ್ಧಾರ ತಳೆದಿರುವದಾಗಿ ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್ ತಿಳಿಸಿದ್ದಾರೆ.ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್, ಹಮೀದ್ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರ ಸಮಕ್ಷಮ ಮಾತುಕತೆ ನಡೆದ ಬಳಿಕ ತಮ್ಮ ನಿಲುವು ಪ್ರಕಟಿಸಿರುವದಾಗಿ ಹಮೀದ್ ಮಾಹಿತಿ ನೀಡಿದ್ದಾರೆ.ಅಭಿಮಾನಿಗಳ ಸಭೆಇದಕ್ಕೂ ಮುನ್ನ ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಐಎನ್‍ಟಿಯೂಸಿಯ ವಿವಿಧ ಘಟಕ, ಕಾಂಗ್ರೆಸ್‍ನ ವಿವಿಧ ಘಟಕಗಳ ಕಾರ್ಯಕರ್ತರು, 270 ಬೂತ್‍ಗಳ ಇಬ್ಬರು ಕಾರ್ಯಕರ್ತರಂತೆ ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಒಳಗೊಂಡಂತೆ ಸಮಾನ ಮನಸ್ಕರ ಸಭೆಯು ಸಿದ್ಧಲಿಂಗಪುರದ ನಾಪಂಡ ಸಭಾಂಗಣದಲ್ಲಿ ನಡೆಯಿತು. (ಮೊದಲ ಪುಟದಿಂದ)ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು, ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಿ ಬೆಳೆಸಲಾಗಿದೆ. ಇದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಆದರೆ, ಬೇರೆ ಪಕ್ಷ ಸೇರುತ್ತಿದ್ದೇನೆ ಎಂಬುದು ಸತ್ಯಕ್ಕೆ ದೂರವಾದದ್ದು. ಸಮಾನ ಮನಸ್ಕರ ಅಭಿಪ್ರಾಯ ಮತ್ತು ರಾಜ್ಯ ಮಟ್ಟದ ನಾಯಕರ ತೀರ್ಮಾನಕ್ಕೆ ಬದ್ಧವಾಗಿದ್ದು, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಈ ಸಂದರ್ಭ ಹಾಜರಿದ್ದ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರು, ಮುತ್ತಪ್ಪ ಅವರು ತನಗೆ ಸಹಕಾರ ನೀಡುತ್ತಾರೆ. ಇಬ್ಬರು ಮಾಜಿ ಸಚಿವರ ಎದುರು ಮಹಿಳೆಯಾಗಿ ಸ್ಪರ್ಧೆಗೆ ಇಳಿದಿದ್ದು, ಕಾರ್ಯಕರ್ತರು, ಜನತೆ ಬೆಂಬಲಿಸಲಿದ್ದಾರೆ. ಗೆಲುವು ಸಾಧಿಸುವದಾಗಿ ಹೇಳಿದರು.
ಸಭೆಯಲ್ಲಿ ಐಎನ್‍ಟಿಯೂಸಿ ಜಿಲ್ಲಾಧ್ಯಕ್ಷ ಟಿ.ಪಿ.ಹಮೀದ್, ಕಾಂಗ್ರೇಸ್ ಬೆಂಬಲಿತ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐಎನ್‍ಟಿಯೂಸಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
-ಕೆ.ಕೆ.ಎನ್. ಶೆಟ್ಟಿ