ಮಡಿಕೇರಿ, ಏ. 26: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ನಗರ ಸಂಯೋಜಕರಾಗಿ ಎ.ಜಿ. ರಮೇಶ್ ಅವರನ್ನು ನೇಮಕ ಮಾಡಲಾಗಿದೆ. ರಾಜೀವ್ ಗಾಂಧಿ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರಾ ಮೈನಾ ನೇಮಕಾತಿ ಆದೇಶವನ್ನು ನೀಡಿದರು.
ನಂತರ ಮಾತನಾಡಿದ ತೆನ್ನೀರಾ ಮೈನಾ, ಮಡಿಕೇರಿ ನಗರದಲ್ಲಿ ಸಂಯೋಜಕರು ಕ್ರಿಯಾಶೀಲರಾಗಿ ಪಕ್ಷ ಸಂಘಟನೆ ಮಾಡಬೇಕೆಂದು ಕಿವಿಮಾತು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಮಾತನಾಡಿ, ಅಧಿಕಾರವನ್ನು ಪಡೆದವರು ಸಕ್ರಿಯವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಸಲಹೆಯಿತ್ತರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಐಸಿಸಿ ಸದಸ್ಯರಾದ ಟಿ.ಪಿ. ರಾಜೇಂದ್ರ, ರಾಹುಲ್ ಬ್ರಿಗೇಡ್ ನಗರಾಧ್ಯಕ್ಷ ಯತೀಶ್ ಕುಮಾರ್, ತಾಲೂಕು ಸಂಯೋಜಕ ಸಮದ್ ಬೆಟ್ಟಗೇರಿ ಹಾಗೂ ಇತರರು ಹಾಜರಿದ್ದರು.