ಸೋಮವಾರಪೇಟೆ,ಏ.26: ಭಾರತ ಚುನಾವಣಾ ಆಯೋಗದ ಸ್ವೀಪ್ ಕೊಡಗು ಕಾರ್ಯಕ್ರಮದಡಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಕಲಚೇತನರಿಂದ ಪಟ್ಟಣದಲ್ಲಿ ಜಾಗೃತಿ ಅಭಿಯಾನ ನಡೆಯಿತು.

ಇಲ್ಲಿನ ತಾಲೂಕು ಕಚೇರಿಯಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಮತದಾನ ಬಗ್ಗೆ ಜಾಗೃತಿ ಘೋಷಣೆ ಕೂಗಲಾಯಿತು. ಯಾವದೇ ಆಮಿಷಗಳಿಗೆ ಒಳಗಾಗದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅರ್ಹ ಅಭ್ಯರ್ಥಿಗೆ ಮತ ನೀಡಿ, ಯಾವದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬೇಡಿ ಎಂಬಿತ್ಯಾದಿ ಫಲಕಗಳನ್ನು ಹಿಡಿದು ತ್ರಿಚಕ್ರ ವಾಹನದಲ್ಲಿ ಜಾಥಾ ನಡೆಸಿದರು.

ತಾಲೂಕು ಕಚೇರಿ ಬಳಿ ಜಾಥಾಕ್ಕೆ ಚಾಲನೆ ನೀಡಿದ ತಹಶೀಲ್ದಾರ್, ಮತದಾನ ಪವಿತ್ರವಾದ ಹಕ್ಕಾಗಿದ್ದು, ಎಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದರು. ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಿಟ್ಟಿಯಪ್ಪ, ಸುನಿಲ್, ಸಬಲೀಕರಣ ಇಲಾಖೆಯ ಹರೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೀಲಾ, ವಿಕಲಚೇತನರ ಸಂಘದ ಅಧ್ಯಕ್ಷ ಸಂಗಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.