ಅರ್ವತ್ತೋಕ್ಲು ಮುತ್ತಪ್ಪ ಜಾತ್ರೆ

*ಗೋಣಿಕೊಪ್ಪಲು: ಅರ್ವತ್ತೋಕ್ಲು ಮೈಸೂರಮ್ಮ ನಗರ ಮುತ್ತಪ್ಪ ಭಕ್ತ ಮಂಡಳಿ ವತಿಯಿಂದ 6ನೇ ವರ್ಷದ ಮುತ್ತಪ್ಪ ಜಾತ್ರೆ ನಡೆಯಿತು. ನೂರಾರು ಭಕ್ತಾದಿಗಳು ಮುತ್ತಪ್ಪ ಹಾಗೂ ತಿರುವಪ್ಪ ದೇವರ ದರ್ಶನ ಪಡೆದರು. ದೇವರಿಗೆ ಹರಕೆ, ಪೂಜೆ, ಪೈಂಗುತ್ತಿ ಅರ್ಪಿಸಿದರು.

ಗಣಪತಿ ಹೋಮ, ಧ್ವಜಾರೋಹಣ, ದೇವರ ಕಲಶ ಕೂರಿಸುವದು, ದೇವರ ಮಲೆ ಇಳಿಸುವದು, ಮುತ್ತಪ್ಪ ದೇವರ ವೆಳ್ಳಾಟಂ, ಬಾಲಕಿಯರಿಂದ ಆರತಿ ಪೂಜೆ, ವಸುರಿಮಲಾ ತೆರೆ ಹೊರಡುವದು ನಂತರ ಅನ್ನಸಂತರ್ಪಣೆ ಹಾಗೂ ಗುಳಿಗೆ ದೇವರ ವೆಳ್ಳಾಟಂ ನಡೆಯಿತು.

ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸದಸ್ಯ. ಸಿ.ಕೆ. ಬೋಪಣ್ಣ ಹಾಗೂ ಪ್ರಮುಖರಾದ ಕಿಲನ್ ಗಣಪತಿ, ಸೂರ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಧರ್ಮಸ್ಥಳದಿಂದ ಧನ ಸಹಾಯ

ಸೋಮವಾರಪೇಟೆ: ಸಮೀಪದ ದೊಡ್ಡತೋಳೂರು ಈಶ್ವರ ದೇವಾಲಯ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ರೂ. 50 ಸಾವಿರ ಧನ ಸಹಾಯ ಒದಗಿಸಿದ್ದು, ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅವರು ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿ.ಎಸ್. ಕುಶಾಲಪ್ಪ, ಕಾರ್ಯದರ್ಶಿ ಕೆ.ಹೆಚ್. ಜಯೇಂದ್ರ, ಖಜಾಂಚಿ ಹೆಚ್.ಸಿ.

ಕೊಮಾರಪ್ಪ, ಗ್ರಾಮಾಧ್ಯಕ್ಷ ಬಿ.ಈ. ಸುರೇಶ್, ಪ್ರಮುಖರಾದ ಕೆ.ಕೆ. ಸುಧಾಕರ್, ಯೋಜನೆಯ ಡಿ.ಕೆ. ರಮೇಶ್ ಅವರುಗಳು ಉಪಸ್ಥಿತರಿದ್ದರು.

ಶ್ರೀಮುನೇಶ್ವರ-ಚಾಮುಂಡೇಶ್ವರಿ ಪ್ರತಿಷ್ಠಾಪನಾ ಮಹೋತ್ಸವ

ಸೋಮವಾರಪೇಟೆ: ಇಲ್ಲಿನ ಮಹದೇಶ್ವರ ಬಡಾವಣೆಯ ದೇವರ ಬನದಲ್ಲಿರುವ ಶ್ರೀ ಮುನೇಶ್ವರ ಮತ್ತು ಚಾಮುಂಡೇಶ್ವರಿ ನೆಲೆಯಲ್ಲಿ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು.

ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಕದ್ರಿ ಮಂಜುನಾಥ ದೇವಸ್ಥಾನದ ಗುರುಗಳಾದ ರಾಜೇಶ್‍ನಾಥ ಅವರು, ಇಂದು ಜಗತ್ತು ಆಧ್ಯಾತ್ಮದಿಂದ ದೂರವಾಗುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲ. ಅಧ್ಯಾತ್ಮಕ್ಕೆ ಅದಮ್ಯ ಶಕ್ತಿಯಿದ್ದು, ಜೀವನದ ಸಂತೃಪ್ತಿಯನ್ನು ಕಾಣಬಹುದಾಗಿದೆ ಎಂದರು. ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಅಹಿಂಸೆಯ ಜಾಗೃತಿಯಿಂದ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಾಗುತ್ತದೆ. ಇಂದು ಕೆಟ್ಟ ರಾಜಕೀಯದಿಂದಾಗಿ ಧರ್ಮ ಧರ್ಮಗಳ ನಡುವೆ ಕಂದಕ ನಿರ್ಮಾಣವಾಗುತ್ತದೆ. ದೇವರ ಪುಣ್ಯ ಕ್ಷೇತ್ರದಲ್ಲಿ ಜಾತಿ, ಮತ, ಭೇದ ಇರುವದಿಲ್ಲ. ದೇವಾಲಯಗಳ ನಿರ್ಮಾಣದಿಂದ ಸಾಮರಸ್ಯ ವೃದ್ಧಿಸುತ್ತದೆ ಎಂದರು.

ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ಗಣಪತಿ ಹೋಮ, ಮಹಾ ಪೂಜೆ, ಭಗವತಿ ಸೇವೆ, ಪಂಚ ದುರ್ಗಾದೀಪ ನಮಸ್ಕಾರ ಪೂಜೆ ನೆರವೇರಿತು. ನಂತರ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯಿತು.

ಈ ಸಂದರ್ಭ ಮಹದೇಶ್ವರ ಭಕ್ತ ವೃಂದದ ಅಧ್ಯಕ್ಷ ಎಸ್.ಆರ್. ರಾಜು, ಉಪಾಧ್ಯಕ್ಷ ಬಿ.ಕೆ. ದೊರೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯ ವಿನಾಯಕ ವಾರ್ಷಿಕೋತ್ಸವ

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯದ ತೃತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭ ಗುರುವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ವಿಜಯ ವಿನಾಯಕ ಸ್ವಾಮಿಗೆ ಕಲಶಾಭಿಷೇಕಕ್ಕಾಗಿ ಮಹಿಳಾ ಭಕ್ತಾದಿಗಳು ಕಲಶವನ್ನು ಹೊತ್ತು ವಾದ್ಯಗೋಷ್ಠಿಯೊಂದಿಗೆ ಮುಖ್ಯ ರಸ್ತೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ದೇವಾಲಯದವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಂತರ ದೇವಾಲಯದಲ್ಲಿ ಪುತ್ತೂರಿನ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಮಣ್ಯ ಬಳ್ಳಕ್ಕುರಾಯ, ದೇವಾಲಯದ ಅರ್ಚಕ ಶೈವಾಗಮ ಪಂಡಿತ ಶೇಷಾಚಲ ಮತ್ತು ಮಂಜುನಾಥ್ ನೇತೃತ್ವದಲ್ಲಿ ಮಹಾ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ವಿನಾಯಕನಿಗೆ 108 ಸೀಯಾಳಾಭಿಷೇಕ, ಮಹಾ ಮಂಗಳಾರತಿ ಹಾಗೂ ರಂಗಪೂಜೆ ನಡೆಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪೂಜಾ ಕೈಂಕರ್ಯ ಸಂದರ್ಭ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಉಪಾಧ್ಯಕ್ಷ ಎಸ್.ಎನ್. ಶೇಷಗಿರಿ, ಕಾರ್ಯದರ್ಶಿ ಕುಮಾರ್, ದಾನಿ ಪವನ್ ದೇವಯ್ಯ ಹಾಗೂ ಸದಸ್ಯರು ಹಾಜರಿದ್ದರು.ಶ್ರೀ ಸಿದ್ದೇಶ್ವರ-ಶ್ರೀಬಸವೇಶ್ವರ ಉತ್ಸವ

ಒಡೆಯನಪುರ: ಗೋಪಾಲಪುರ ಮತ್ತು ಒಡೆಯನಪುರ ಜೋಡಿ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ದೇವರುಗಳ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡ ದೇವರುಗಳ ಉತ್ಸವ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕೊನೆಗೊಂಡಿತು. ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಗೋಪಾಲಪುರ ಮತ್ತು ಒಡೆಯನಪುರ ಜೋಡಿ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಬಂದು ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ಉಭಯ ಗ್ರಾಮಗಳ ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕರ್ಕಳ್ಳಿ ಬಾಣೆ ಶ್ರೀ ಚೌಡೇಶ್ವರಿ ಉತ್ಸವ

ಸೋಮವಾರಪೇಟೆ: ಸಮೀಪದ ಕರ್ಕಳ್ಳಿ ಬಾಣೆ, ನಗರೂರು ಗ್ರಾಮದ ಚೌಡೇಶ್ವರಿ ದೇವಾಲಯದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ಹೋಮ ನಡೆಯಿತು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಹಾನಗಲ್ಲು ಬಾಣೆ ಚೌಡೇಶ್ವರಿ ಪೂಜೋತ್ಸವಕ್ಕೆ ತೆರೆ

ಸೋಮವಾರಪೇಟೆ: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹಾಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಗ್ರಾಮದ ಶ್ರೀ ಬಸವೇಶ್ವರ, ಮುನೇಶ್ವರ, ಗುಳಿಗ, ಶಕ್ತಿ ದೇವತೆಗಳಿಗೆ ಪೂಜೆ ನೆರವೇರಿಸಲಾಯಿತು. ಶ್ರೀ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರಿಂದ ದೇವಾಲಯದಲ್ಲಿ ಗಣಪತಿ ಹೋಮ, ಕಲಶ ಮೆರವಣಿಗೆ ಜರುಗಿತು.

ತಾ. 24 ರಂದು ವಾರ್ಷಿಕ ಮಹಾ ಪೂಜೋತ್ಸವದ ಅಂಗವಾಗಿ ಮಹಾಮಂಗಳಾರತಿ, ವಿಶೇಷ ಪೂಜೆ, ಮಧ್ಯಾಹ್ನ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಮತ್ತು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಶಶಿಕುಮಾರ್, ಕಾರ್ಯದರ್ಶಿ ರಂಜಿತ್, ಖಜಾಂಚಿ ಚಂದ್ರ, ಪದಾಧಿಕಾರಿಗಳಾದ ಸುರೇಶ್, ಬಬಿನ್ ರೈ, ವಾಸು, ಪಾಂಡಿಯನ್, ರಮೇಶ್, ರೈಯು, ಸೋಮೇಶ್, ನಾಗರಾಜು, ರಾಜು ಸೇರಿದಂತೆ ಇತರರು ಪೂಜೋತ್ಸವದ ಉಸ್ತುವಾರಿ ವಹಿಸಿದ್ದರು.

ದೇವಾಲಯದ ವಾರ್ಷಿಕೋತ್ಸವ

ಮಡಿಕೇರಿ: ಇಲ್ಲಿಗೆ ಸನಿಹದ ಕಗ್ಗೋಡ್ಲು - ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ, ಶ್ರೀ ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ವಾರ್ಷಿಕೋತ್ಸವ ತಾ. 27 ರಿಂದ ಮೇ 1 ರತನಕ ನಡೆಯಲಿದೆ. ಈ ಸಂದರ್ಭ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿರುವದಾಗಿ ದೇವಾಲಯದ ಅಧ್ಯಕ್ಷರು ಮತ್ತು ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.ಶ್ರೀ ದಂಡಿನ ಮಾರಿಯಮ್ಮ ಬ್ರಹ್ಮ ಕಲಶೋತ್ಸವ

ಮಡಿಕೇರಿ: ಸುಂಟಿಕೊಪ್ಪ ಸಮೀಪದ ಅತ್ತೂರು-ನಲ್ಲೂರು ಗ್ರಾಮ ವ್ಯಾಪ್ತಿಯ ಮತ್ತಿಕಾಡು ಶ್ರೀ ದಂಡಿನ ಮಾರಿಯಮ್ಮ ದೇವಾಲಯ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮ ಕಲಶೋತ್ಸವ ತಾ. 30 ರವರೆಗೆ ನಡೆಯಲಿದೆ.

ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ದೇವಿಯ ಮತ್ತು ಗಣಪತಿ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ವಿವಿಧ ತಾಂತ್ರಿಕ ವೈದಿಕ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಆಚಾರ್ಯ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವಿ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮಕ್ಕೆ ಭಕ್ತರು ಸಹಕರಿಸಬೇಕೆಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮನವಿ ಮಾಡಿಕೊಂಡಿದೆ.

ತಾ. 26 ರಂದು (ಇಂದು) ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಮಧ್ಯಾಹ್ನ ಅಂಕುರ ಪೂಜೆ, ಮಹಾ ಪೂಜೆ, ಅಪರಾಹ್ನ 7 ಗಂಟೆಯಿಂದ ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾ ಪೂಜೆ ನಡೆಯಲಿದ್ದು, ತಾ. 27 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಶಾಂತಿ ಹೋಮಗಳು, ದಹನ ಪ್ರಾಯಶ್ಚಿತ ತ್ರಿಕಾಲ ಪೂಜೆ, ಮಧ್ಯಾಹ್ನ ಅಂಕುರ ಪೂಜೆ, ಮಹಾ ಪೂಜೆ, ಅಪರಾಹ್ನ 7 ಗಂಟೆಯಿಂದ ಹೋಮ ಕಲಶಾಭಿಷೇಕ, ಅನುಜ್ಞಾ ಕಲಶ ಪೂಜೆ, ಮಹಾಪೂಜೆ ನಡೆಯಲಿದೆ. ತಾ. 28 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ತತ್ವ ಕಲಶಾಭಿಷೇಕ ಅನುಜ್ಞಾ ಕಲಶಾಭಿಷೇಕ ತ್ರಿಕಾಲ ಪೂಜೆ, ಮಧ್ಯಾಹ್ನ ಅಂಕುರ ಪೂಜೆ, ಮಹಾ ಪೂಜೆ, ಅಪರಾಹ್ನ 7 ಗಂಟೆಯಿಂದ ಅನುಜ್ಞಾ ಬಲಿ ಕ್ಷೇತ್ರ ಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬ ಶುದ್ದಿ ಕಲಶ ಪೂಜೆ ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ.

ತಾ. 29 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವಕಲಶ ಪೂಜೆ, ಕಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಆಧಿವಾಸ ಹೋಮದ ಅಗ್ನಿ ಜನನ, ತತ್ವಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವ ಕಲಶ ಶಯ್ಯೋನ್ನಯನ, ಮಧ್ಯಾಹ್ನ ಅಂಕುರ ಪೂಜೆ, ಮಹಾಪೂಜೆ ಅಪರಾಹ್ನ ಧ್ಯಾನಧಿವಾಸ, ಆಧಿವಾಸ ಹೋಮ, ಶಿರಸ್ತತ್ವ ಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ ವಾಸ್ತು ಪುಣ್ಯಾಹಂತ, ಬ್ರಹ್ಮ ಕಲಶ ಮಹಾಪೂಜೆ ನಡೆಯಲಿದೆ. ತಾ, 30 ರಂದು ಬೆಳಿಗ್ಗೆ 6 ಗಂಟೆಯಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ 10.23ರ ಮಿಥುನ ಲಗ್ನ, ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾ ಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ವನದುರ್ಗಿ ದೇವರ ವಾರ್ಷಿಕ ಪೂಜೋತ್ಸವ

ಸೋಮವಾರಪೇಟೆ: ಇಲ್ಲಿನ ರೇಂಜರ್ ಬ್ಲಾಕ್‍ಗೆ ಒಳಪಡುವ ಶ್ರೀವನದುರ್ಗಿ ದೇವಿಯ ವಾರ್ಷಿಕ ಮಹಾ ಪೂಜೋತ್ಸವ ಸ್ಥಳೀಯ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಗ್ರಾಮ ದೇವರುಗಳಾದ ಚೌಡಿ, ವನದುರ್ಗಾ, ಗುಳಿಗ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರೇಂಜರ್ಸ್ ಬ್ಲಾಕ್ ಯೂತ್ ಕ್ಲಬ್, ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಪೂಜೋತ್ಸವ ಭಕ್ತಾದಿಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಿವಪ್ರಸಾದ್ ತಿಳಿಸಿದರು. ಪೂಜೋತ್ಸವದ ಉಸ್ತುವಾರಿಯನ್ನು ಅನಿಲ್ ಶೆಟ್ಟಿ ತಣ್ಣೀರುಹಳ್ಳ, ಅನಿಲ್ ಚೌಡ್ಲು, ಮನುಕುಮಾರ್, ದರ್ಶನ್, ಚೋಂದಮ್ಮ, ಮಂದಣ್ಣ, ಗಂಗಾಧರ್, ಕುಸುಮ, ಸುಧಾಕರ್ ಶೆಟ್ಟಿ ಸೇರಿದಂತೆ ಗ್ರಾಮಸ್ಥರು ವಹಿಸಿದ್ದರು.

ಪ್ರತಿಷ್ಠಾಪನಾ ಮಹೋತ್ಸವ

ಸೋಮವಾರಪೇಟೆ: ಇಲ್ಲಿನ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮುನೀಶ್ವರ ಮತ್ತು ಶ್ರೀಚಾಮುಂಡೇಶ್ವರಿ ದೇಗುಲದಲ್ಲಿ ಶ್ರೀ ಮಹದೇಶ್ವರಸ್ವಾಮಿ ಭಕ್ತ ವೃಂದದಿಂದ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿತು.

ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಮಹಾಪೂಜೆ, ಭಗವತಿ ಸೇವೆ, ಪಂಚ ದುರ್ಗಾದೀಪ ನಮಸ್ಕಾರ ನೆರವೇರಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಮಹದೇಶ್ವರಸ್ವಾಮಿ ಭಕ್ತ ವೃಂದದ ಅಧ್ಯಕ್ಷ ಎಸ್.ಆರ್. ರಾಜು, ಉಪಾಧ್ಯಕ್ಷ ಬಿ.ಕೆ. ದೊರೆ, ಪದಾಧಿ ಕಾರಿಗಳಾದ ಗೋವಿಂದ, ದಯಾ ನಂದ, ಪ್ರಶಾಂತ್, ಜೋಯಪ್ಪ, ಸುರೇಶ್, ಬಿ.ಬಿ. ಮೋಹನ್, ಬಿ.ಟಿ. ತಿಮ್ಮಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.