ಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಇದೀಗ ಅಂತಿಮವಾಗಿ ಹದಿನೇಳು ಮಂದಿ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಇಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಣದಲ್ಲಿದ್ದ ಒಟ್ಟು 13 ಮಂದಿಯ ಪೈಕಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ನಾಪಂಡ ಎಂ. ಮುತ್ತಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಹೇಮಂತ್ ಕುಮಾರ್ ಎಂಬವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಅಂತಿಮವಾಗಿ 11 ಮಂದಿ ಅಖಾಡದಲ್ಲಿ ಉಳಿದುಕೊಂಡಿದ್ದಾರೆ.

ಇನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಉಮೇದುವಾರಿಕೆ ಸಲ್ಲಿಸಿದ್ದರು. ಆ ಪೈಕಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ಹಾಗೂ ಮಾಂಗೇರ ಪದ್ಮಿನಿ ಪೊನ್ನಪ್ಪ ಇಂದು ಸ್ಪರ್ಧೆಯಿಂದ ಹಿಂದೆ ಸರಿಯುವದರೊಂದಿಗೆ ತಮ್ಮ ಉಮೇದುವಾರಿಕೆ ಹಿಂಪಡೆದು ಕೊಂಡಿದ್ದಾರೆ. ಇವರೊಂದಿಗೆ ಮೂವರು ಪಕ್ಷೇತರರು ಕೂಡ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.ವಿಧಾನಸಭಾ ಚುನಾವಣೆ ಸಂಬಂಧ ನಾಮಪತ್ರ ವಾಪಸ್ ಪಡೆಯಲು ಕಡೆ ದಿನವಾದ ಇಂದು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ (ಮೊದಲ ಪುಟದಿಂದ) ಸ್ವೀಕೃತವಾಗಿದ್ದ 24 ಮಂದಿಯಲ್ಲಿ 7 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಉಳಿದಂತೆ 17 ಮಂದಿ ಕಣದಲ್ಲಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕೃತವಾಗಿದ್ದ 13 ಮಂದಿಯಲ್ಲಿ 2 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಉಳಿದಂತೆ 11 ಮಂದಿ ಕಣದಲ್ಲಿದ್ದಾರೆ.

ಕಣದಲ್ಲಿರುವವರು: ಅಪ್ಪಚ್ಚುರಂಜನ್(ಭಾರತೀಯ ಜನತಾ ಪಕ್ಷ), ಕೆ.ಪಿ.ಚಂದ್ರಕಲಾ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಜೀವಿಜಯ (ಜೆಡಿಎಸ್), ಭಾರ್ಗವ (ಎಬಿಎಚ್‍ಎಂಎಸ್), ರಶೀದಾ ಬೇಗಂ(ಎಐಎಂಇಪಿ), ಕೆ.ಬಿ.ರಾಜು(ಭಾರತೀಯ ರಿಪಬ್ಲಿಕ್ ಪಕ್ಷ), ಕಿಶನ್, ಖಲೀಲ್, ಬಿ.ಎಂ.ತಿಮ್ಮಯ್ಯ, ಎಂ.ಮಹಮದ್ ಹನೀಫ್, ಪಿ.ಎಸ್.ಯಡೂರಪ್ಪ ಅವರುಗಳು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಹಾಗೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವೀಕೃತವಾಗಿದ್ದ 11 ಮಂದಿಯ ನಾಮಪತ್ರದಲ್ಲಿ 5 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಉಳಿದಂತೆ 6 ಮಂದಿ ಕಣದಲ್ಲಿದ್ದಾರೆ.

ಕಣದಲ್ಲಿರುವವರು: ಸಿ.ಎಸ್.ಅರುಣ್ ಮಾಚಯ್ಯ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಕೆ.ಜಿ.ಬೋಪಯ್ಯ (ಭಾರತೀಯ ಜನತಾ ಪಕ್ಷ), ಸಂಕೇತ್ ಪೂವಯ್ಯ (ಜೆಡಿಎಸ್), ಎಚ್.ಡಿ.ಬಸವರಾಜು(ಎಐಎಂಇಪಿ), ಎಚ್.ಡಿ.ದೊಡ್ಡಯ್ಯ ಹಾಗೂ ಎಂ.ಕೆ.ನಂಜಪ್ಪ ಅವರು ಪಕ್ಷೇತರರಾಗಿ ಕಣದಲ್ಲಿದ್ದಾರೆ.ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಪ್ಪಚಂಡ ಗಿರಿ ಉತ್ತಪ್ಪ, ಎಂ.ಕೆ.ಫೈಜಲ್, ಪಿ.ಎಸ್.ಮುತ್ತ ನಾಮಪತ್ರ ವಾಪಸ್ ಪಡೆದಿದ್ದಾರೆ.