ಮಗುವಿನಲ್ಲಿ ಅನೇಕ ಸುಪ್ತಶಕ್ತಿಗಳು ಅಂತರ್ಗತವಾಗಿರುತ್ತದೆ. ಆ ಸುಪ್ತಶಕ್ತಿಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಾನುಭವಗಳನ್ನು ಪಡೆಯಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುವದೇ ಶಿಕ್ಷಣ. ಈ ಶಿಕ್ಷಣ ಪರಿಸರಕ್ಕೆ ತಕ್ಕಂತೆ ಮಗು ತನ್ನ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತದೆ. ಆದರೆ ಪ್ರಾಣಿಗಳಲ್ಲಿ ಈ ಗುಣಗಳಿರುವದಿಲ್ಲ. ನಮಗೆ ಸಿಕ್ಕಂತಹ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಶಿಕ್ಷಣ ಪಡೆಯಬೇಕು.
ಶಾಲೆಯಲ್ಲಿ ಮಕ್ಕಳು ಪದೇ ಪದೇ ಬರೆದು, ಓದಿ, ಕಂಠಪಾಠ ಮಾಡಿ, ಲೆಕ್ಕ ಮಾಡಿ ಶಾಲೆಯ ವಿವಿಧ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದರಿಂದ ಮಕ್ಕಳಲ್ಲಿ ಆಕರ್ಷಕ ರೀತಿಯ ಶಿಸ್ತು, ಉತ್ತಮ ವರ್ತನಾ ವಿಧಾನ, ಕಾರ್ಯಕುಶಲತೆ, ಮೂಲ ಸ್ವಭಾವ ಬದಲಾವಣೆ, ನಿರ್ದಿಷ್ಟ ವಿಷಯ ಕೌಶಲ್ಯ, ಕ್ರಮಬದ್ಧತೆ, ಏರ್ಪಟ್ಟು ಯಾಂತ್ರಿಕವಾಗಿ ಕಾಲವ್ಯಯವಿಲ್ಲದೇ ಹಿತಕರ ಆಸಕ್ತಿಗಳಿಗೆ, ಅಗತ್ಯತೆಗಳಿಗೆ ವಯೋಮಿತಿಗೆ ಅನುಗುಣವಾಗಿ ತರಬೇತಿ ಶಿಕ್ಷಣದಿಂದ ಉಂಟಾಗುತ್ತದೆ. ಇದರಿಂದ ಆಂತರಿಕ ಅಭಿರುಚಿ ಹಾಗೂ ಭಾವಾ ಉದಾತ್ತ ಮನೋಭಾವ, ಸಂಶೋಧನಾ ಪ್ರವೃತ್ತಿ ಉಂಟಾಗುತ್ತದೆ. ವಿಕಸಿತವಾದ ಶಿಕ್ಷಣದಿಂದ ಕಲಿಕೆಯ ವರ್ಗಾವಣೆ ಜೀವನದ ವಿವಿಧ ಕ್ಷೇತ್ರಗಳಾದ ರಾಜಕೀಯ, ಸಾಮಾಜಿಕ, ಆರ್ಥಿಕ ರಕ್ಷಣೆ ಮುಂತಾದ ಕ್ಷೇತ್ರಗಳಿಗೆ ವರ್ಗಾಯಿಸಲ್ಪಟ್ಟ ಸಮಾಜದ, ದೇಶದ, ರಾಷ್ಟ್ರದ ಪ್ರಗತಿಗೆ ಸಾಧ್ಯವಾಗುತ್ತದೆ.
ಅಜ್ಞಾನವೆಂಬ, ಅಂಧಕಾರದಲ್ಲಿ ತೊಳಲಾಡುವ ಮಕ್ಕಳಿಗೆ ಸುಜ್ಞಾನವೆಂಬ ಬೆಳಕನ್ನು ಚೆಲ್ಲಿ ಈ ಪ್ರಪಂಚದಲ್ಲಿ ಆಗು-ಹೋಗುಗಳ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿ ಜೀವಿತದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುವದಾಗಿದೆ.
ವಿದ್ಯೆಯಿಂದ ವಿನಯ, ವಿನಯದಿಂದ ಸಮಾಜದಲ್ಲಿ ಉತ್ತಮ ಅಧಿಕಾರ, ಅಧಿಕಾರದಿಂದ ಹಣ, ಹಣದಿಂದ ಸೌಖ್ಯ ಬರುವದು. ಸರ್ವಜ್ಞನ ಪ್ರಕಾರ ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕೂ.
ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸಿಕೊಳ್ಳಲು ಬೃಹತ್ತಾದ ವಾತಾವರಣದ ನಿರ್ಮಾಣದ ಪ್ರಯತ್ನವೇ ಶಿಕ್ಷಣವಾಗಿದೆ. ಶಾಲೆಯೆಂಬ ದೇಗುಲಕ್ಕೆ ನಿತ್ಯ ಬರುವ ಭಕ್ತಾದಿಗಳೇ ಈ ವಿದ್ಯಾರ್ಥಿಗಳು. ಇಲ್ಲಿ ಯಾವದೇ ರೀತಿಯ ಬೇಧ - ಭಾವ, ಜಾತಿ - ಮತ, ಮೇಲು - ಕೀಳೆಂಬ ಅಂತರವಿಲ್ಲ. ಇಲ್ಲಿ ಶಿಕ್ಷಕರೇ - ದೇವರು. ದೇವರು ಅನುಗ್ರಹ, ವರವನ್ನು ಕರುಣಿಸಿದಾಗ ಭಕ್ತರಿಗೆ ಅನುಕೂಲವಾಗುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸತ್ಚಾರಿತ್ಯ, ಗುಣ ನಡತೆ, ವ್ಯಕ್ತಿತ್ವ, ಮಾನವೀಯ ಮೌಲ್ಯಗಳು, ನೈತಿಕತೆ, ಸಮಾಜದಲ್ಲಿ ವ್ಯಕ್ತಿಗಳೊಂದಿಗೆ ಬೆರೆಯುವಿಕೆಯೆಂಬ ವರಗಳನ್ನು ಕರುಣಿಸುತ್ತಾರೆ. ಅದನ್ನು ಶ್ರದ್ಧಾಭಕ್ತಿಯಿಂದ ನಮಿಸಿ ವಂದಿಸಿದರೆ ಫಲ ದೊರೆಯುವಲ್ಲಿ ಯಶಸ್ಸು ಲಭಿಸುತ್ತದೆ.
- ಅಮ್ಮಂಡ ಅನುಪಮ ತಿಮ್ಮಯ್ಯ, ವೀರಾಜಪೇಟೆ.