ಗೋಣಿಕೊಪ್ಪಲು, ಏ. 27: ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾಳಧನಿಕರನ್ನು ನಿರ್ಮೂಲನೆ ಮಾಡುವದಾಗಿ ಹೇಳಿ ಪ್ರಧಾನ ಮಂತ್ರಿಯಾದ ನರೇಂದ್ರಮೋದಿಜಿ ಅವರು, ಯಡಿಯೂರಪ್ಪ ಅವರನ್ನು ಹೇಗೆ ಕರ್ನಾಟಕದ ಮುಖ್ಯಮಂತ್ರಿ ಮಾಡುತ್ತಾರೆ. ಭ್ರಷ್ಟಾಚಾರದ ಹಣೆಪಟ್ಟಿ ಹೊತ್ತು ಜೈಲಿಗೆ ಹೋಗಿ ದಾಖಲೆ ಮಾಡಿದ ಮುಖ್ಯಮಂತ್ರಿಯನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡುವದಾದರೂ ಹೇಗೆ? ಇದು ಮೋದಿಜೀ ನ್ಯಾಯವೇ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು.ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಜೆ 4 ಗಂಟೆಗೆ ಜರುಗಿದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಚುನಾವಣಾ ಉಸ್ತುವಾರಿ ವಹಿಸಿರುವ ಅಮಿತ್ ಶಾ ಅವರೇ ಯಡಿಯೂರಪ್ಪ ಭ್ರಷ್ಟಾಚಾರಿ ಎಂದು ಬಹಿರಂಗವಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯದ ಮಾದರಿ ಅಭಿವೃದ್ಧಿ ಮಂತ್ರವನ್ನು ಜಪಿಸಿದ ಶಾ ಅವರು ಒಪ್ಪಿಕೊಂಡಂತೆ ಜೈಲಿಗೆ ಹೋದವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಟೀಕಿಸಿದರು.

ಸರ್ಕಾರಿ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲೆಯ ಸಹಸ್ರಾರು ಕಾಂಗ್ರೆಸ್ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕರ್ನಾಟಕದ ಮುಖ್ಯಮಂತ್ರಿಗಳು ‘ಬೇಟಿ ಬಚಾವೋ-ಬೇಟಿ ಪಡಾವೋ’ ಎಂದು ರಾಜ್ಯದ ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತ್ತಕೋತ್ತರದವರೆಗೆ ಉಚಿತ ಶಿಕ್ಷಣ ಘೋಷಣೆ ಮಾಡಿದ್ದರೆ, ಪ್ರಧಾನಿ ಮೋದಿ ಅವರು ‘ಬೇಟಿ ಬಚಾವೋ- ಬಿಜೆಪಿ ಸೆ ಲಾವೋ’ ಎಂದು ಹೇಳುತ್ತಿದ್ದಾರೆ. ದೇಶಾದ್ಯಂತ ನಿರಂತರ ಭಾರತೀಯ ಹೆಣ್ಣುಮಕ್ಕಳು ಅತ್ಯಾಚಾರ, ಬಲಾತ್ಕಾರಕ್ಕೆ ಒಳಗಾಗುತ್ತಿದ್ದರೂ ಅಂತಹಾ ಹೆಣ್ಣುಮಕ್ಕಳ ಬಗ್ಗೆ ಪ್ರಧಾನ ಮಂತ್ರಿ ಮಾತನಾಡದಿರುವದು ವಿಷಾದÀನೀಯ ಎಂದರು. ಹಿಂದೂಸ್ಥಾನ್ ಬಗ್ಗೆ ಕಾಳಜಿ ಇದೆ ಎಂದು ಹೇಳುವ ಮೋದಿ ಸರ್ಕಾರದಲ್ಲಿ ಆದಿವಾಸಿ, ದಲಿತ, ರೈತರ ಹೆಣ್ಣುಮಕ್ಕಳ ಮಾನ ಹರಾಜಾಗುತ್ತಿರುವದಾಗಿ ದೂಷಿಸಿದರು.

ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್, ಅಕ್ಷರ ದಾಸೋಹ ಇತ್ಯಾದಿ ಜನಪರ ಕಾರ್ಯಕ್ರಮ ರೂಪಿಸುತ್ತಿರಬೇಕಾದರೆ, ಅಮಿತ್ ಶಾ ಮಹಿಳೆಯರ ರಕ್ಷೆ, ಮಕ್ಕಳ ರಕ್ಷೆ ಬಗ್ಗೆ ಮಾತನಾಡುತ್ತಿದ್ದಾರೆ.

ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಹಿಂದಿನ ಕಾಂಗ್ರೆಸ್ ಪ್ರಣಾಳಿಕೆಯಂತೆಯೇ ಸರ್ಕಾರ ನಡೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ ಒಂದು, ನಾಲ್ಕು ಕಂದಾಯ ವಿಭಾಗಗಳಿಗೆ ಒಂದೊಂದು ಹಾಗೂ 30 ಜಿಲ್ಲೆಗಳಿಗೆ ತಲಾ ಒಂದೊಂದು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆ ಜಿಲ್ಲೆಗೆ ತೆರಳಿ ಅಲ್ಲಿನ ಜನತೆಯ ಸಮಸ್ಯೆಯನ್ನು ಆಲಿಸಿ ಪ್ರಣಾಳಿಕೆ ರೂಪಿಸಲಾಗಿದೆ. ಈ ಹಿಂದಿನ 19 ಪ್ರಣಾಳಿಕೆ ಬೇಡಿಕೆಯನ್ನು ಪೂರ್ಣಗೊಳಿಸಿದಂತೆ ಈ ಬಾರಿಯೂ ಕಾಂಗ್ರೆಸ್ ತನ್ನ ಪ್ರಣಾಳಿಕೆ ಈಡೇರಿಕೆಗೆ ಬದ್ಧವಾಗಿದೆ. ಇದು ದೇಶದಲ್ಲಿಯೇ ಮೊದಲು ಎಂದು ಹೇಳಿದರು.

ಬಸವಣ್ಣನವರ ವಚನ ‘ನುಡಿದಂತೆ ನಡೆ’ ಎಂಬಂತೆ ಮೋದಿ ನಡೆದುಕೊಳ್ಳಬೇಕಿತ್ತು. ಆದರೆ, ರೈತಾಪಿ ವರ್ಗ, ಬಡ ಮಧ್ಯಮ ವರ್ಗಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಪ್ರತಿಯೊಬ್ಬರ

(ಮೊದಲ ಪುಟದಿಂದ) ಬ್ಯಾಂಕ್ ಖಾತೆಗೂ ತಲಾ ರೂ.15 ಲಕ್ಷ ಜಮಾ ಮಾಡುವದಾಗಿ ಚುನಾವಣೆ ಸಂದರ್ಭ ಭರವಸೆ ನುಡಿದ ಮೋದಿಗೆ ನಯಾಪೈಸೆಯನ್ನೂ ಜಮಾ ಮಾಡಲಾಗಿಲ್ಲ. ಬದಲಿಗೆ 15ಕ್ಕೂ ಅಧಿಕ ವಾಣಿಜ್ಯೋದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.

ರೂ. 500, ರೂ. 1000 ಮುಖ ಬೆಲೆಯ ನೋಟು ರದ್ದತಿಯಿಂದ ಕಾಳಧನಿಕರಿಗೇನೂ ನಷ್ಟವಾಗಿಲ್ಲ. ಬದಲಿಗೆ ಬಡ ಮಧ್ಯಮವರ್ಗದವರು ತಮ್ಮ ಹಣ ಪಡೆಯುವದಕ್ಕೆ ಬ್ಯಾಂಕ್ ಮುಂದೆ, ಎಟಿಎಂ ಮುಂದೆ ಕ್ಯೂ ನಿಲ್ಲಬೇಕಾಯಿತು. ನಮ್ಮ ಜೇಬಿನಿಂದ ತೆಗೆದ 30,000 ಕೋಟಿ ಹಣ ನೀರವ್ ಮೋದಿ ಜೇಬಿಗೆ ಹೋಗಿದೆ. ಸ್ವತಃ ಅಮಿತ್ ಶಾ ಪುತ್ರ ಜಯಂತ್ ಶಾ ಸುಮಾರು ರೂ.50,000 ಕೋಟಿ ಭ್ರಷ್ಟಾಚಾರ ಮಾಡಿದ್ದರೂ ಪ್ರಧಾನ ಮಂತ್ರಿ ಶ್ರೀರಕ್ಷೆ ನೀಡಿದ್ದಾರೆ. ರಾಜ್ಯದಲ್ಲಿ 8 ಜನ ಕಾಳಧನಿಕರಿಗೆ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಇವರಿಗೆಲ್ಲಾ ಸಿಬಿಐನಿಂದ ರಕ್ಷೆಯನ್ನೂ ನೀಡಿರುವ ವಿರುದ್ಧ ನ್ಯಾಯಕ್ಕಾಗಿ ನ್ಯಾಯಾಲಯ ಮೊರೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದರು.

ಭಾರತ ರೈತರಿಗೆ ಉತ್ತಮ ಯೋಜನೆ ರೂಪಿಸುವದಾಗಿ ಹೇಳಿದ ಮೋದಿ ಸಾಲ ಮನ್ನಾ ಮಾಡಿಲ್ಲ. ರೈತರ ಸಬ್ಸಿಡಿಗೂ ಕಡಿವಾಣ ಹಾಕಿದೆ. ಕೇವಲ ಲೀಟರ್‍ಗೆ ರೂ.17 ರಷ್ಟಿರುವ ಪೆಟ್ರೋಲ್ ಬೆಲೆ ಇದೀಗ ದಿನನಿತ್ಯ ಗಗನಕ್ಕೇರುತ್ತಿದೆ. ಇದರ ಲಾಭ ಪ್ರಧಾನ ಮಂತ್ರಿ ಆಸುಪಾಸಿನಲ್ಲಿರುವ 4-5 ಮಿತ್ರರ ಪಾಲಾಗುತ್ತಿದೆ ಎಂದು ಹೇಳಿದರಲ್ಲದೆ, ಯುದ್ಧ ವಿಮಾನ ಖರೀದಿ, ಹಿಂದೂಸ್ಥಾನ್ ಏರೋ ನಾಟಿಕಲ್ ಲಿ.ನ ಬೆಂಗಳೂರು ಗುತ್ತಿಗೆ ಹಗರಣ, ಗುಜರಾತ್ ಪೆಟ್ರೋಲಿಯಂ ಹಗರಣದ ಹವಾಲ ಹಣ ಪ್ರಧಾನಿ ಮಿತ್ರರಿಗೆ ಸೇರುತ್ತಿದೆ. ಚೀನಾ ದೇಶದ ರಾಷ್ಟ್ರಪತಿ ಗುಜರಾತ್‍ಗೆ ಭೇಟಿ ನೀಡಿ ಹೋದ ನಂತರ ದೋಕ್ಲಾ ಗಡಿಯನ್ನು ಚೀನಾ ಆರ್ಮಿ ಆಕ್ರಮಿಸಿದ ಸಂದರ್ಭ ಪ್ರಧಾನಿ ಯಾವದೇ ಸದ್ದು ಮಾಡಿಲ್ಲ ಎಂದು ಟೀಕಿಸಿದರು.

ಈ ಬಾರಿ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಹೊಂದಲು ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು.

ಜೈಲು-ಬೈಲು ನಾಯಕರಿಗೆ ಮೋದಿ ಮಣೆ

ದೇವರಾಜ ಅರಸು ಸರ್ಕಾರದ ನಂತರ 5 ವರ್ಷ ಪೂರ್ಣ ಸರ್ಕಾರ ನಡೆಸಿರುವ ಮುಖ್ಯಮಂತ್ರಿ ನಾನು ಮಾತ್ರ. ಈ ಹಿಂದಿನ ಬಿಜೆಪಿ ಸರ್ಕಾರ ಜೈಲು-ಬೈಲು ಸರ್ಕಾರ. ಜೈಲಿಗೆ ಹೋಗುವದು ಬೈಲು ತಗೊಂಡು ಹೊರಬರುವದು ಇವರ ಕಾಯಕ. ಇವರಿಗೆ ಮೋದಿ ನಾಯಕರ ಪಟ್ಟ ನೀಡುತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಿಗಳಿಗೆ ಒತ್ತು ನೀಡುತ್ತ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ವೀರಾಜಪೇಟೆ ಕ್ಷೇತ್ರದ ಅರುಣ್‍ಮಾಚಯ್ಯ ಹಾಗೂ ಮಡಿಕೇರಿ ಕ್ಷೇತ್ರದ ಚಂದ್ರಕಲಾ ಪ್ರಸನ್ನ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಂತೆ ಇಲ್ಲಿನ ಜನರ ಮನಸ್ಸು ಅಷ್ಟೇ ಸುಂದರವಾಗಿದೆ. ಇಲ್ಲಿನ ಜನ ಸ್ನೇಹಕ್ಕೆ, ವಿಶ್ವಾಸಕ್ಕೆ ಅರ್ಹರು. ದೇಶದ, ನಾಡಿನ ಸ್ಥಿತಿಗತಿ ತಿಳಿದಿರುವ ಪ್ರಬುದ್ಧತೆ ಇರುವ ಜನ ಎಂದು ಹೊಗಳಿದರು.

ಕೇಂದ್ರದ 4 ವರ್ಷದ ಸಾಧನೆ ಶೂನ್ಯ

ಬಾಯಿ-ಬಡಾಯಿಯಲ್ಲಿಯೇ ಮುಗಿದು ಹೋಯಿತು.ಮಾತಿನಿಂದ ಹೊಟ್ಟೆ ತುಂಬಲ್ಲ. ಇವರದು ಮನ್ ಕೀ ಬಾತ್ ಮಾತ್ರ. ಕಾಮ್ ಕೀ ಬಾತ್ ನಹೀ ಹೈ ಎಂದು ಕುಟುಕಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ದಿಢೀರ್ ಆದಾಯ ಹೆಚ್ಚಳ ಹೇಗೆ ಆಯಿತು. ನೋಟು ಅಮಾನ್ಯತೆಯ ನಂತರ ಅಮಿತ್ ಶಾ ಪುತ್ರನ ಆದಾಯ ರೂ.80 ಲಕ್ಷ ಕೋಟಿಗೆ ಹೇಗೆ ಹೆಚ್ಚಳವಾಯಿತು. ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದವರು. ಜೈಲು ಮತ್ತು ಬೈಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ಧನ ರೆಡ್ಡಿ ಮುಂತಾದ ನಾಯಕರಿಗೆ ಸಾಮಾನ್ಯ. ಇದೀಗ ಬೈಲಲ್ಲಿರುವರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ನರೇಂದ್ರಮೋದಿ 4-5 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಆದರೆ, ಯಾವ ಸಭೆಯಲ್ಲಿಯೂ ದೇಶದ ಸಮಸ್ಯೆ, ರಾಜ್ಯದ ಸಮಸ್ಯೆಯನ್ನು ಪ್ರಸ್ತಾಪ ಮಾಡಲಿಲ್ಲ.ಕರ್ನಾಟಕಕ್ಕೆ ಕೇಂದ್ರದ ಕೊಡುಗೆ ಏನೆಂದೂ ಹೇಳಿಲ್ಲ. ಇವರಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡಲು ಗೊತ್ತಿಲ್ಲದ ಹಿನ್ನೆಲೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು. ರಾಜ್ಯ ಸರ್ಕಾರದ ಮೇಲೆ ಆಧಾರ ರಹಿತ, ಬೇಜವಾಬ್ದಾರಿ ಆರೋಪ ಹೊರಿಸುತ್ತಿರುವದಾಗಿ ದೂಷಿಸಿದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರೊಂದಿಗೆ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಆದರೆ ಅವರಿಗೆ ಧಮ್ಮಿಲ್ಲ ಎಂದೂ ವ್ಯಂಗ್ಯವಾಡಿದರು.

ತಾನು ವಿದ್ಯಾರ್ಥಿಯಾಗಿದ್ದಾಗ ಕಿತ್ತಳೆ ಹಣ್ಣಿಗಾಗಿ ಕೊಡಗಿಗೆ ಬರುತ್ತಿದ್ದೆ. ಇದೀಗ ಕಿತ್ತಳೆ ಉತ್ಪಾದನೆ ಕುಂಠಿತವಾಗಿದೆ.ವಿಯಟ್ನಾಮ್ ಕಾಳುಮೆಣಸು ಭಾರತಕ್ಕೆ ಆಮದಾಗಲು ಮೋದಿ ಸರ್ಕಾರ ಕಾರಣ. ಅಮಿತ್ ಶಾ ಪುತ್ರನ ಕೈವಾಡದಿಂದಾಗಿ ಇಂದು ಭಾರತದ ಕಾಳು ಮೆಣಸು ದರ ಕುಸಿತಕ್ಕೆ ಕಾರಣ ಎಂದು ಹೇಳಿದರು.

ನಾವು ನುಡಿದಂತೆ ನಡೆದಿದ್ದೇವೆ. ಕೊಡಗು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಮತ್ತೊಮ್ಮೆ ಕ್ಷೇತ್ರದ ಜನತೆ ಆಶೀರ್ವದಿಸುವಂತೆ ಮನವಿ ಮಾಡಿದರು. ಕರ್ನಾಟಕ ನಾಲ್ಕು ಕೋಟಿ ಜನತೆಗೆ ಪ್ರತೀ ತಿಂಗಳು 7 ಕೆ.ಜಿ.ಅಕ್ಕಿ, ಇದು ರಾಷ್ಟ್ರದಲ್ಲಿಯೇ ಪ್ರಥಮ. ನಮ್ಮ ಅನ್ನಭಾಗ್ಯವನ್ನು ವಿರೋಧ ಪಕ್ಷದವರು ಕನ್ನಭಾಗ್ಯ ಎಂದು ಕದ್ದು ಊಟಮಾಡಿದ ನಂತರ ಅವಹೇಳನ ಮಾಡುತ್ತಿದ್ದಾರೆ.

ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಹೋಗದಂತೆ ನಿರ್ಬಂದವಿದ್ದು ಅದಿರು ಹಗರಣದಿಂದ ಮೊಳಕಾಲ್ಮೂರಿ ನಲ್ಲಿಯೇ ಮನೆ ಮಾಡಿದ್ದಾರೆ. ಹೆಣ ತೆಗೆದುಕೊಂಡು ಹೋಗಲು ಹಣ ಕೇಳಿದ ಆಸ್ಪತ್ರೆ ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು, ಕೇಂದ್ರ ಸರ್ಕಾರ ಸಚ್ ಕೆ ಸಾತ್, ಸಬ್ ಕೆ ವಿಕಾಶ್ ಮಾಡುತ್ತಿಲ್ಲ. ಸಬ್ ಕೆ ವಿನಾಶ್ ಮಾಡುತ್ತಿದೆ ಎಂದು ಟೀಕಿಸಿದರು.

ಎಲ್ಲ ಜಾತಿ ಧರ್ಮಗಳ ರಕ್ಷಣೆಗೆ ಒತ್ತು ನೀಡುವದು ನಮ್ಮ ಧ್ಯೇಯ ಎಂದು ಹೇಳಿದರು. ಕೋಮುವಾದಿ ಪಕ್ಷದ ಜತೆ ಸೇರಿ ಈ ಹಿಂದೆ ಸರ್ಕಾರ ರಚಿಸಿದ ಕುಮಾರಸ್ವಾಮಿ ಪಕ್ಷಕ್ಕೂ ಈ ಬಾರಿ ಭವಿಷ್ಯವಿಲ್ಲ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಭೆಗೆ ರಾಹುಲ್ ಗಾಂಧಿ ಆಗಮನಕ್ಕೂ ಮುನ್ನ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸಭೆಯಲ್ಲಿ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು, ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದಾಗ್ಯೂ ವೀಣಾ ಅಚ್ಚಯ್ಯ ಅವರಿಗೆ ವಿಧಾನ ಪರಿಷತ್ ಸ್ಥಾನ ಮಾನ ನೀಡಲಾಯಿತು. ರಾಜ್ಯದ ಎಲ್ಲ ಜಿಲ್ಲೆಗೂ ಅನುದಾನ ಸಮಾನ ಹಂಚಿಕೆ ಮಾಡಲಾಗಿದೆ. ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 1900 ಕೋಟಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸ ಲಾಗಿದೆ.ಎಲ್ಲ ಕ್ಷೇತ್ರಗಳಲ್ಲಿಯೂ ಯುವ ಜನಾಂಗಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ವೇಣು ಗೋಪಾಲ್, ಕೆಪಿಸಿಸಿಯ ವಿಷ್ಣು ನಾಥನ್, ವತ್ಸಲಾ ಪ್ರಸಾದ್, ವೆಂಕಪ್ಪಗೌಡ, ಜಿಲ್ಲೆಯ ಪ್ರಮುಖರಾದ ವೀಣಾ ಅಚ್ಚಯ್ಯ, ಮಿಟ್ಟುಚಂಗಪ್ಪ, ಯಾಕೂಬ್, ಇಬ್ರಾಹಿಂ, ಕೆ.ಎಂ. ಇಬ್ರಾಹಿಂ, ಪಿ.ಕೆ.ಪೆÇನ್ನಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷೆ ಸರಿತಾ ಪೂಣಚ್ಚ, ತಾರಾ ಅಯ್ಯಮ್ಮ, ಮಾಜಿ ಸಚಿವೆ ಸುಮಾವಸಂತ್, ನೆರವಂಡ ಉಮೇಶ್, ವಕ್ತಾರ ಟಾಟೂ ಮೊಣ್ಣಪ್ಪ, ಸರ ಚಂಗಪ್ಪ, ಕೊಲ್ಯದ ಗಿರೀಶ್, ಬೇಕಲ್ ರಮಾನಾಥ, ವಿನೋದ್ ಶಿವಪ್ಪ, ವಕೀಲ ಧ್ರುವ, ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ತೆನ್ನೀರ ಮೈನ, ತೀತಿರ ಧರ್ಮಜ ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪ್ರಮುಖರು ಉಪಸ್ಥಿತರಿದ್ದರು.