ಮಡಿಕೇರಿ, ಏ. 27: ಭಾರತ ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಜೊತೆಗೆ ಈ ಬಾರಿ ವಿವಿಪ್ಯಾಟ್ನ್ನು ಪರಿಚಯಿಸುತ್ತಿದೆ. ಮತದಾರರು ತಾವು ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಮತಗಟ್ಟೆಗಳ ವ್ಯಾಪ್ತಿಗೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿರುವದು ವಿಶೇಷವಾಗಿದೆ.
ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಮತ್ತು ಜಾಗೃತಿ ಸಮಿತಿ (ಸ್ವೀಪ್) ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮತದಾನ ಮಾಡುವ ಸಂದರ್ಭ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ವೀಕ್ಷಿಸಬಹುದು. ತದನಂತರ ಆ ಚೀಟಿಯು ಬಾಕ್ಸ್ ಒಳಗೆ ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ). ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ-ಪಕ್ಷಕ್ಕೆ ಮತ ಚಲಾವಣೆಯಾಗಿರುವದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ. ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು.
ಇವಿಎಂ ಯಂತ್ರಗಳು ಅತ್ಯಂತ ಸುರಕ್ಷಿತವಾಗಿವೆ. ಈ ಯಂತ್ರದಲ್ಲಿ ಮೈಕ್ರೋ ಕಂಟ್ರೋಲರ್ ಚಿಪ್ ಅಳವಡಿಸಲಾಗಿದ್ದು, ವಿದ್ಯುನ್ಮಾನ ಮತಯಂತ್ರವನ್ನು ಒಮ್ಮೆ ಮಾತ್ರ ಪ್ರೊಗ್ರಾಂ ಮಾಡಲು ಸಾಧ್ಯ. ಚಿಪ್ನಲ್ಲಿರುವ ಸಾಫ್ಟ್ವೇರ್ ಕೋಡ್ ರೀಡ್ ಅಥವಾ ರೀರೈಟ್ ಮಾಡಲು ಸಾಧ್ಯವಿಲ್ಲ. ಈ ತಂತ್ರಾಂಶವನ್ನು ಬಿಇಎಲ್ ಮತ್ತು ಇಸಿಐಇಲ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇವಿಎಂ ಯಂತ್ರಗಳನ್ನು ಅಂತರ್ಜಾಲ ಅಥವಾ ಇನ್ಯಾವುದೇ ನೆಟ್ವರ್ಕ್ ಸಂಪರ್ಕದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಯಂತ್ರದಲ್ಲಿ ಯಾವದೇ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡದಿರುವದರಿಂದ ವೈರಸ್ ದಾಳಿ ಉಂಟಾಗುವ ಭಯವೂ ಇಲ್ಲ.
ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಪ್ರಾತ್ಯಕ್ಷಿಕೆಗಾಗಿ ಒದಗಿಸಲಾಗಿದೆ. ಈ ತಂಡಗಳು ವಿಧಾನಸಭಾ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಸಂಚರಿಸಿ ಈ ಯಂತ್ರದ ಕಾರ್ಯನಿರ್ವಹಣೆ ಬಗ್ಗೆ ವಿವರಿಸುತ್ತದೆ. ಮತದಾರರು ಸಹ ಈ ಯಂತ್ರವನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಹಿರಿಯ ನಾಗರಿಕ ರನ್ನೊಳಗೊಂಡಂತೆ ಪ್ರತಿಯೊಬ್ಬ ರಿಗೂ ಮಾಹಿತಿ ನೀಡಲಾಗುತ್ತಿದೆ. ಸಂತೆ, ಜಾತ್ರೆ ಹಾಗೂ ಜನನಿಬಿಡ ಸ್ಥಳಗಳಲ್ಲಿ ಬೀದಿ ನಾಟಕಗಳು ಹಾಗೂ ಜಾಥಾಗಳನ್ನು ಹಾಗೂ ಮೊಬೈಲ್ ಎಲ್ಇಡಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಅನಕ್ಷರಸ್ಥ ಹಾಗೂ ಗ್ರಾಮೀಣ ಮತದಾರರನ್ನು ತಲುಪಲಾಗುತ್ತಿದೆ.
ಮೊಬೈಲ್ ಬಳಕೆದಾರರು ಹಾಗೂ ಯುವಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಕರಪತ್ರ ಬ್ಯಾನರ್, ಕೈಪಿಡಿ, ಜಾಹೀರಾತು ಹೀಗೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವದರ ಜೊತೆಗೆ ಇವಿಎಂ ಹಾಗೂ ವಿವಿಪ್ಯಾಟ್ ಕುರಿತ ಕಿರುಚಿತ್ರ ಹಾಗೂ ಸ್ಲೈಡ್ಗಳನ್ನು ಥಿಯೇಟರ್ಸ್ ಹಾಗೂ ಸಿನಿಮಾ ಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾ ಧಿಕಾರಿಗಳ ಕಚೇರಿ ಹಾಗೂ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು ನಗರ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿವೆ. ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತ ದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಚುನಾವಣಾ ಆಯೋಗ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.