ಕೂಡಿಗೆ, ಏ. 27: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶುದ್ಧೀಕರಣ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಹಾಗೂ ನೀರು ಶುದ್ಧೀಕರಣಕ್ಕೆ ಬೇಕಾದ ಕ್ಲೋರಿನ್ ಸರಬರಾಜು ಇಲ್ಲದ ಹಿನ್ನೆಲೆಯಲ್ಲಿ ಬುಧವಾರ 12 ಗ್ರಾಮಗಳಿಗೆ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಈ ವ್ಯಾಪ್ತಿ ಗ್ರಾಮಸ್ಥರು ನೀರಿಗಾಗಿ ಪರದಾಡುವಂತ ಸ್ಥಿತಿ ಕಂಡುಬಂದಿತ್ತು. ಈ ವಿಷಯ ತಿಳಿದ ತಾಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿ ವೀರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಏಳು ಜನ ಕಾರ್ಮಿಕರಿಗೆ ಒಂದು ತಿಂಗಳ ವೇತನವನ್ನು ನೀಡಿದ್ದು, ಉಳಿದ ವೇತನವನ್ನು ಚುನಾವಣೆಯ ನಂತರ ನೀಡಲಾಗುವದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭ ಒಡೆದು ಹೋಗಿದ್ದ ಪೈಪ್‍ಲೈನ್‍ಗಳನ್ನು ಸರಿಪಡಿಸಿ 12 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಯಿತು.

ನೀರು ಶುದ್ಧೀಕರಣಕ್ಕೆ ಬೇಕಾಗುವ ರಾಸಾಯನಿಕ ವಸ್ತುವನ್ನು ಇದೀಗ ಕಡಿಮೆ ಪ್ರಮಾಣದಲ್ಲಿ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ವಾರ್ಷಿಕವಾಗಿ ಬೇಕಾಗುವ ರಾಸಾಯನಿಕ ವಸ್ತುವನ್ನು ಖರೀದಿಗೆ ಮುಂದಾಗುತ್ತೇವೆ ಎಂದು ವೀರೇಶ್ ತಿಳಿಸಿದರು.