ಮಡಿಕೇರಿ, ಏ. 27: ನಗರದ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಶ್ರೀ ಆಂಜನೇಯ ಗುಡಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಇಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೈವಿಕ ಕೈಂಕರ್ಯಗಳೊಂದಿಗೆ ನೆರವೇರಿತು. ವಾರ್ಷಿಕೋತ್ಸವ ಅಂಗವಾಗಿ ಸನ್ನಿಧಿಯಲ್ಲಿ ಗಣಹೋಮ, ಕಲಶ ಸ್ಥಾಪನೆಯೊಂದಿಗೆ ಸಾನಿಧ್ಯ ಶುದ್ಧಿ ಅಭಿಷೇಕದೊಂದಿಗೆ ಮಹಾಪೂಜೆ ನೆರವೇರಿಸಲಾಯಿತು.
ಈ ಪ್ರಯುಕ್ತ ಕಾಸರಗೋಡುವಿನ ಪದ್ಮಪ್ರಿಯ ಭಜನಾ ಮಂಡಳಿ ವತಿಯಿಂದ ವಿಶೇಷ ಭಜನೆ ನೆರವೇರಿತು. ಮಹಾಪೂಜೆಯ ಬಳಿಕ ಸದ್ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಗರದ ಅರುಣ್ ಸ್ಟೋರ್ ಮಾಲೀಕ ಅರುಣ್ ಕುಮಾರ್ ಹಾಗೂ ಸಂಸಾರ ಶ್ರೀ ಆಂಜನೇಯನಿಗೆ ಈ ಸಂದರ್ಭ ಬೆಳ್ಳಿಯ ಪ್ರಭಾವಳಿ ಸಮರ್ಪಿಸಿದರೆ, ಭಕ್ತ ಭೀಮಯ್ಯ ಸಂಸಾರದಿಂದ ಬೆಳ್ಳಿಯ ಎರಡು ಕಂಬದ ದೀಪ ಒಪ್ಪಿಸಿ ದೇವರ ಕೃಪೆಗೆ ಪಾತ್ರರಾದರು.
ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್‍ಕುಮಾರ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಸೇರಿದಂತೆ ಇತರ ಪ್ರಮುಖರು, ಭಕ್ತ್ತ ಪಾಲ್ಗೊಂಡಿದ್ದರು. ಅರ್ಚಕ ಸಂತೋಷ್ ಭಟ್ ತಂಡ ಪೂಜಾ ಕೈಂಕರ್ಯ ನೆರವೇರಿಸಿದರು.