ವೀರಾಜಪೇಟೆ, ಏ. 27: ಮೇ 12ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಅವರ ಪರವಾಗಿ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಇಂದು ಮನೆಮನೆಗೆ ತೆರಳಿ ಮತಯಾಚಿಸಿದರು.
ಮಾರಿಗುಡಿಯಿಂದ ತೆಲುಗರ ಬೀದಿ, ಜೈನರಬೀದಿ ಸೇರಿದಂತೆ ಮುಖ್ಯ ಬೀದಿಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜನರ ಭಾವನೆ, ನೋವು, ನಲಿವುಗಳಿಗೆ ಸ್ಪಂದಿಸದ ರಾಷ್ಟ್ರೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಬಾರಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವದು ನಿಶ್ಚಿತ. ವೀರಾಜಪೇಟೆ ಕ್ಷೇತ್ರದಿಂದ ಸಂಕೇತ್ ಪೂವಯ್ಯ ಅವರನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲ ಪಡಿಸಿ ಎಂದರು.
ಇದೇ ಸಂದÀರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ, ವಿರಾಜಪೇಟೆ ಅಧ್ಯಕ್ಷ ಎಸ್ ಎಚ್ ಮತೀನ್, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಸಿ.ಎಲ್ ವಿಶ್ವ, ಅಮ್ಮಂಡ ವಿವೇಕ್, ಅಜ್ಜಾಮಾಡ ಮುತ್ತಮ್ಮ, ಪಂದ್ಯಂಡ ರವಿಮಾದಪ್ಪ, ಮೈಸೂರು ವಲಯ ಅಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಾಪುರ: ಮಾಲ್ದಾರೆ, ಗುಡ್ಲೂರುವಿನಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರ ಹಾಗೂ ಬಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದರು. ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರೈತರ-ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆಲುವು ಖಚಿತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಅಭ್ಯರ್ಥಿ ಸಂಕೇತ್ ಪೂವಯ್ಯ, ವೀರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಎಸ್. ಮತೀನ್ ಇತರರು ಹಾಜರಿದ್ದರು. ಗ್ರಾಮದ ಮಹಿಳೆಯರು ಆರತಿ ಬೆಳಗಿಸಿ ಸ್ವಾಗತಿಸಿದರು.ಜೆಡಿಎಸ್ ಅಧಿಕಾರಕ್ಕೆ
ರಾಜ್ಯದ ವಿವಿಧೆಡೆಗಳಲ್ಲಿ ಜೆ.ಡಿ.ಎಸ್ ಪರ ಚುನಾವಣಾ ಪ್ರಚಾರ ಕೈಗೊಂಡಾಗ ಜನರ ಒಲವು ಜೆ.ಡಿ.ಎಸ್. ಪಕ್ಷದ ಮೇಲಿರುವದು ಕಂಡು ಬಂದಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ, ಬೆಳೆಗಾರರ ಪೂರ್ಣ ಸಾಲ ಮನ್ನಾ, ಸ್ತ್ರೀ ಶಕ್ತಿ, ಮಹಿಳಾ ಸಂಘಟನೆಗಳ ಸಾಲ ಮನ್ನಾ ಮಾಡಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವದು. ಜಾತ್ಯತೀತವಾಗಿ ಸಮಾನತೆ ಎಲ್ಲ ವರ್ಗಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುವದು ಎಂದರು.
ಸಂಕೇತ್ ಪೂವಯ್ಯ ಮಾತನಾಡಿ ಈ ಬಾರಿ ಚುನಾವಣೆಯಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಪಕ್ಷದ ನಾಯಕರುಗಳ ನಿರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿ ಬದಲಾವಣೆ ಖಚಿತ ಎಂದರು.