ಪೊನ್ನಂಪೇಟೆ, ಏ. 27: ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಸೇರಿದಂತೆ ಪ್ರಾದೇಶಿಕ ಪಕ್ಷವಾಗಿರುವ ಜೆ.ಡಿ.(ಎಸ್.) ಕೊಡಗಿನ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಯಾವದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.
ಇವರು ತಮ್ಮ ಪಕ್ಷವನ್ನು ಬೆಳೆಸಲು ಮೊದಲ ಆಧ್ಯತೆ ನೀಡಿದರೆ ಹೊರತು ಜನತೆಯ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ (ಎಂ.ಇ.ಪಿ.) ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಮಾಜಿ ಶಾಸಕ ಹೆಚ್.ಡಿ. ಬಸವರಾಜು ಹೇಳಿದ್ದಾರೆ.
‘ಶಕ್ತಿ’ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಿರುವ ರಾಜಕೀಯ ಪಕ್ಷಗಳು ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವದೇ ಕೊಡಗಿನಲ್ಲಿ ಇಂದು ಒಂದು ರೀತಿಯ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಜ್ವಲಂತವಾಗಿರುವ ಗಿರಿಜನರ ಪುನರ್ವಸತಿ, ಕಾಫಿ ಬೆಳೆಗಾರರ ಸಮಸ್ಯೆ, ಕಾಡಾನೆ ಹಾವಳಿ, ಕುಡಿಯುವ ನೀರಿನ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಲು ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಆಪಾದಿಸಿದ್ದಾರೆ.
ಇದುವರೆಗೂ ರಾಜ್ಯವಾಳಿದ ಎಲ್ಲಾ ಸರಕಾರಗಳು ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಯಾವದೇ ಸಂಕೋಚವಿಲ್ಲದೆ ಹೇಳಬಲ್ಲೆ. ಕಳೆದ 5 ವರ್ಷಗಳಲ್ಲಿ ಒಂದೇ ಸರಕಾರದ ಮೂವರು ಉಸ್ತುವಾರಿ ಸಚಿವರನ್ನು ಈ ಜಿಲ್ಲೆ ಕಾಣಬೇಕಾಯಿತು.
ರಾಜ್ಯದಲ್ಲೇ ಅತಿ ಚಿಕ್ಕ ಜಿಲ್ಲೆಯಾದ ಕೊಡಗನ್ನು ಅಭಿವೃದ್ಧಿ ವಿಚಾರದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಜನತೆ ಬಳಿ ಹೇಳಲು ಇದಕ್ಕಿಂತ ಬೇರೆ ನಿದರ್ಶನ ಬೇಕೆ?.
ಎಲ್ಲಾ ಅರ್ಹತೆಗಳಿದ್ದರೂ ಕುಶಾಲನಗರ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸದ ಕಾಂಗ್ರೆಸ್ ಸರಕಾರ ಪೊನ್ನಂಪೇಟೆ ಹೋಬಳಿಯನ್ನು ತಾಲೂಕಾಗಿ ಘೋಷಣೆ ಮಾಡುವದುಂಟೆ? ಎಂದು ಪ್ರಶ್ನಿಸಿರುವ ಹೆಚ್.ಡಿ. ಬಸವರಾಜು ಅವರು, ಈಗಿನ ಕಾಂಗ್ರೆಸ್ ಸರಕಾರ ಕೊಡಗಿನ ಜನರ ಸಮಾನತೆಯ ಬದುಕಿನ ಬುನಾದಿಗೆ ಕಳಂಕ ಹಚ್ಚುವ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಂಇ.ಪಿ.ಯನ್ನು ಜನತೆಗೆ ಪರಿಚಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈಗಿರುವ ರಾಷ್ಟ್ರೀಯ ಪಕ್ಷಗಳು ಜನಸಾಮಾನ್ಯರ ಭಾವನೆಗಳಿಗೆ ಸರಿಯಾದ ಬೆಲೆ ನೀಡುತ್ತಿಲ್ಲ ಇದರಿಂದ ಇಡೀ ದೇಶದಲ್ಲಿ ಸಾಮಾಜಿಕ ಅಭದ್ರತೆ ಮತ್ತು ನಿರುದ್ಯೋಗ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಸರಿಯಾದ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮುಂದೆ ಬಂದಿರುವ ಡಾ. ನೌಹೇರ ಶೇಕ್ ಎಂಬ ಮುಸ್ಲಿಂ ಮಹಿಳಾ ಉದ್ಯಮಿ ತನ್ನ ಉದ್ಯಮದಲ್ಲಿ ಗಳಿಸಿರುವ ಹಣವನ್ನು ರಾಷ್ಟ್ರಸೇವೆಗೋಸ್ಕರ ಮುಡಿಪಾಗಿರಿಸಿ ದೇಶದ ಎಲ್ಲಾ ವರ್ಗದ ಜನಸಾಮಾನ್ಯರ ನೋವನ್ನು ನಿವಾರಿಸುವ ಸಲುವಾಗಿ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷ(ಎಂ.ಇ.ಪಿ.)ವನ್ನು ಸ್ಥಾಪಿಸಿದ್ದಾರೆ. ಇದು ದೇಶದ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಹೇಳಿದರು.
ನನಗೆ ಈ ಕ್ಷೇತ್ರ ಹೊಸದೇನಲ್ಲ. ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಹಿಂದೆ ಮೀಸಲು ಕ್ಷೇತ್ರವಾಗಿದ್ದಾಗ ಒಟ್ಟು ಮೂರು ಬಾರಿ ಸ್ಪರ್ಧಿಸಿ ಜನರ ಆಶೀರ್ವಾದದಿಂದ 2 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಒಂದು ರೀತಿಯಲ್ಲಿ ನನಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರವಿದು.
ಈ ಕಾರಣದಿಂದ ನನಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದೊಂದಿಗೆ ಭಾವನಾತ್ಮಕವಾದ ಸಂಬಂಧವಿದೆ. ಇದೀಗ ಕ್ಷೇತ್ರ ವಿಂಗಡನೆಯಾದ ನಂತರ ಮಡಿಕೇರಿ ಕ್ಷೇತ್ರದ ಕೆಲ ಬಾಗ ಇದರೊಂದಿಗೆ ಸೇರ್ಪಡೆಯಾಗಿದೆ. ಅದು ಬಿಟ್ಟರೆ ಹೊಸದೇನಿಲ್ಲ. ಈಗಾಗಲೇ ಕ್ಷೇತ್ರದಾದ್ಯಂತ 2 ಸುತ್ತು ಸಂಚರಿಸಿದ್ದೇನೆ. ಜನ ಬಹಳ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ ಎಂದರು.
ತಾನು 2 ಬಾರಿ ಶಾಸಕನಾಗಿದ್ದಾಗಲೂ ನನಗೆ ಇಲ್ಲಿನ ಮುಖಂಡರ ನಿರೀಕ್ಷಿತ ಸಹಕಾರ ದೊರೆಯಲಿಲ್ಲ. ಆದರೆ ನನ್ನ ಗೆಲುವಿನಲ್ಲಿ ಇವರ ಪ್ರಮುಖ ಪಾತ್ರವಿತ್ತು. ಅದನ್ನು ನಾನು ಅಲ್ಲಗಳೆಯುವದಿಲ್ಲ. ಆದರೆ ಆಡಳಿತದಲ್ಲಿ ನನಗೆ ಹೆಚ್ಚಿನ ಬೆಂಬಲ ಸಿಕ್ಕಿಲ್ಲ. ಇದರಿಂದಾಗಿ ನನ್ನ ಬಹಳಷ್ಟು ಯೋಜನೆಗಳು ಕನಸಾಗಿಯೇ ಉಳಿಯುವಂತಾಯಿತು ಎಂದು ವಿಷಾದಿಸಿದರು.
-ರಫೀಕ್ ತೂಚಮಕೇರಿ