ಮಡಿಕೇರಿ, ಏ. 27: ಕರ್ನಾಟಕ ವಿಧಾನಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ 120ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಲಭಿಸುವದರೊಂದಿಗೆ ಬಹುಮತದ ಸರಕಾರ ರಚನೆಗೊಳ್ಳಲಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥೂರ್ ಭವಿಷ್ಯ ನುಡಿದರು. ಇಂದು ನಗರಕ್ಕೆ ಭೇಟಿ ನೀಡಿದ ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣದೊಂದಿಗೆ ಗೆಲುವಿನ ಅವಕಾಶವಿದೆ ಎಂಬದಾಗಿ ಅವರು ಸುಳಿವು ನೀಡಿದರು.ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ರೂಪಿಸಿರುವ ಹಲವಷ್ಟು ಜನಪರ ಯೋಜನೆಯ ಕಾರ್ಯಕ್ರಮಗಳು ಮತ್ತು ಕರ್ನಾಟಕ ಸರಕಾರದ ವಿರುದ್ಧ ಜನತೆಯಲ್ಲಿರುವ ಅಸಮಾಧಾನ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಶ್ರೀರಕ್ಷೆಯೆಂದ ಓಂ ಪ್ರಕಾಶ್ ಅವರು, ಕೊಡಗಿನ ಎರಡು ಕ್ಷೇತ್ರಗಳೊಂದಿಗೆ ರಾಜ್ಯದಲ್ಲಿ 120ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಮಾರ್ನುಡಿದರು.
ಚುನಾವಣಾ ಸಂಬಂಧ ಕಾರ್ಯ ಕರ್ತರು ಬೂತ್ ಮಟ್ಟದಿಂದಲೇ ಕೆಲಸ ಮಾಡುವ ದಿಸೆಯಲ್ಲಿ ಒತ್ತು ನೀಡಲಾಗುತ್ತಿದೆ ಎಂದ ಅವರು, ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರುಗಳು ರೂಪಿಸಿರುವ ಕಾರ್ಯ ಯೋಜನೆಯಂತೆ ಪಕ್ಷದ ಪ್ರಮುಖರು ಕೆಲಸ ಮಾಡುತ್ತಿರುವದಾಗಿ ತಿಳಿಸಿದರು. ಕರ್ನಾಟಕದ ಕೆಲವೆಡೆ ಅಭ್ಯರ್ಥಿ ಆಯ್ಕೆ ಸಂಬಂಧ ಸಣ್ಣ ಪುಟ್ಟ ಗೊಂದಲಗಳಿದ್ದು, ಆ ಬಗ್ಗೆ ಗಮನ ಹರಿಸಿ ಸರಿಪಡಿಸಲಾಗುವದು ಎಂದ ಅವರು, ಚುನಾವಣೆ ವೇಳೆ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದೊಳಗೆ ಬಹುಮತದ ನಿರ್ಧಾರದಿಂದ ಎಲ್ಲವನ್ನು ಸರಿಪಡಿಸಲಾಗುವದು ಎಂದು ಮಾರ್ನುಡಿದರು.
ಕಾರ್ಯಕರ್ತರೊಂದಿಗೆ ಸಮಾಲೋಚನೆ : ಆ ಮುನ್ನ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಲಯ ಮಟ್ಟದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳೊಂದಿಗೆ, ರಾಷ್ಟ್ರೀಯ ಉಪಾಧ್ಯಕ್ಷರು ಚುನಾವಣಾ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು. ಎಲ್ಲ ಸ್ತರದ ಕಾರ್ಯಕರ್ತರು ಪ್ರತಿ ಜನವಸತಿ, ಮನೆ ಮನೆಗಳಲ್ಲಿ ಮತದಾರರಿಗೆ ಬಿಜೆಪಿ ಯೋಜನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಕನಸಿನ ಜನಪರ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡುವಂತೆ ಅವರು ತಿಳಿ ಹೇಳಿದರು.
ಸಚಿವರ ಸಲಹೆ : ಉತ್ತರಪ್ರದೇಶ ಸರಕಾರದ ಸಚಿವ ಮಹೇಂದ್ರ ಸಿಂಗ್ ಯಾದವ್ ಕೂಡ ಈ ಸಂದರ್ಭ ಕಾರ್ಯಕರ್ತರಿಗೆ ಚುನಾವಣಾ ಸಂದರ್ಭ ಅನುಸರಿಸಬೇಕಾದ ಮಾರ್ಗೋಪಾಯ ಕುರಿತು ಸಲಹೆ ನೀಡಿದರು. ದೇಶದ ಮುನ್ನಡೆಗೆ ಪ್ರಧಾನಿ ಮೋದಿ ಕೈಗೊಂಡಿರುವ ಮಹತ್ವಪೂರ್ಣ ಯೋಜನೆಗಳನ್ನು ಜನತೆಗೆ ಮನನ ಮಾಡಿಕೊಡುವಂತೆ ಕಿವಿಮಾತು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪಕ್ಷದ ವಿಭಾಗ ಪ್ರಭಾರಿ ಯತೀಶ್‍ಕುಮಾರ್, ಪ್ರಮುಖರಾದ ರಂಜಿತ್, ಬೇಬಿ ಸುನಾಧನ್, ಪ್ರಸಾದ್ ಸೇರಿದಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಪದಾಧಿಕಾರಿಗಳಾದ ರಾಬಿನ್ ದೇವಯ್ಯ, ರವಿಕಾಳಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮೋರ್ಚಾಗಳ ಪ್ರಮುಖರು ಪಾಲ್ಗೊಂಡಿದ್ದರು.