ಮಡಿಕೇರಿ, ಏ. 27: ಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ಕಾವೇರಿ ಜನ್ಮಭೂಮಿ ಟ್ರಸ್ಟ್ ವತಿಯಿಂದ ತಳಾರಬಾಣೆಯಲ್ಲಿರುವ ಟ್ರಸ್ಟ್‍ನ ಕಟ್ಟಡದಲ್ಲಿ ತೆರೆಯಲಾಗಿರುವ ಅನಾಥಾಶ್ರಮದ ಉದ್ಘಾಟನಾ ಕಾರ್ಯಕ್ರಮ ಹಾಗೂ 11ನೇ ವರ್ಷದ ತವರೂರ ಕ್ರೀಡಾಕೂಟ ತಾ. 29ರಿಂದ ಮೇ 1ರವರೆಗೆ ನಡೆಯಲಿದೆ.

ತಾ. 29ರಂದು ಬೆಳಿಗ್ಗೆ 11 ಗಂಟೆಗೆ ಅನಾಥಾಶ್ರಮವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಏರ್ ಮಾರ್ಷಲ್ (ನಿ) ಕೆ.ಸಿ. ಕಾರ್ಯಪ್ಪ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನಾಗಮೋಹನ್‍ದಾಸ್, ಆನಂದ್ ಬೈರರೆಡ್ಡಿ, ವೇಣುಗೋಪಾಲ್ ಗೌಡ, ಇಸ್ರೋ ಸಂಸ್ಥೆ ನಿವೃತ್ತ ಮುಖ್ಯ ಅಭಿಯಂತರ ಡಾ. ವೆಂಕಟರಮಣ, ಡಾ. ವಸಂತ್ ಕುಮಾರ್ ತಿಮ್ಮಾಪುರ, ದೂರದರ್ಶನ ನಿವೃತ್ತ ಜಂಟಿ ನಿರ್ದೇಶಕ ಡಾ. ಮಹೇಶ್ ಜೋಷಿ, ವಕೀಲರಾದ ಎಸ್. ಶೇಖರ್ ಶೆಟ್ಟಿ, ಕಿರಣ್ ಜಾವಲಿ, ಕೆ.ಕೆ. ಸ್ವಾಮಿ, ಮಕ್ಕಳ ರಕ್ಷಣಾ ಅಧಿಕಾರಿ ಮಮ್ತಾಜ್, ಆನಂದತೀರ್ಥ ಸ್ವಾಮಿ, ನಾರಾಯಣಾಚಾರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಗೌಡ ವಿದ್ಯಾಸಂಘ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಭಾಗವಹಿಸುವರು.

ಕ್ರೀಡಾಕೂಟ

29ರ ಮಧ್ಯಾಹ್ನ ನಂತರ ತವರೂರ ಕ್ರೀಡಾಕೂಟ ನಡೆಯಲಿದೆ. ಪುರುಷರ ಮುಕ್ತ 3000 ಮೀ. ಓಟ, ಮಹಿಳೆಯರ ಮುಕ್ತ 1500 ಮೀ. ಓಟ, 16 ವರ್ಷಗಳ ಒಳಗಿನ ಬಾಲಕರ 1500 ಮೀ. ಓಟದ ಸ್ಪರ್ಧೆ ನಡೆಯಲಿದೆ. ತಾ. 30 ಹಾಗೂ ಮೇ 1ರಂದು ಭಾಗಮಂಡಲ, ಚೆಟ್ಟಿಮಾನಿ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ.