ಮಡಿಕೇರಿ, ಏ. 27: ರಾಜ್ಯದ ಬಿಪಿಎಲ್ ಕಾರ್ಡುದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಬಿಪಿಎಲ್ ಕಾರ್ಡುದಾರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ. ಮುತ್ತಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುತೇಕ ಬಿಪಿಎಲ್ ಕಾರ್ಡುದಾರರಿಗೆ ವಾಸಕ್ಕೆ ಮನೆ ಇಲ್ಲ. ಮನೆ ನಿರ್ಮಿಸಲು ಹಣಕಾಸಿನ ನೆರವು ಇಲ್ಲದಿರುವದ ರಿಂದ ಇನ್ನೂ ಹಲವಾರು ಮಂದಿ ಬಾಡಿಗೆ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಬ್ಯಾಂಕ್‍ಗಳು ಕೂಡ ಸಾಲ ನೀಡುತ್ತಿಲ್ಲ ಎಂದು ದೂರಿದರಲ್ಲದೆ, ರಾಜ್ಯ ಸರಕಾರ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತಿರುವಂತೆ ಕೇಂದ್ರ ಸರಕಾರ ಬಿಪಿಎಲ್ ಕಾರ್ಡು ದಾರರಿಗೆ ಮನೆ ಕಟ್ಟಲು 3 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಬಿಪಿಎಲ್ ಕಾರ್ಡುದಾರರು ಖಾಯಂ ಉದ್ಯೋಗ ಇಲ್ಲದೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡುದಾರರು ಸಂಘಟಿತರಾದಲ್ಲಿ ಕನಿಷ್ಟ ಕೃಷಿ ಉದ್ಯೋಗವನ್ನು ಕಲ್ಪಿಸಲು ಸಂಘಟನೆ ಪ್ರಯತ್ನಿಸಲಿದೆ ಎಂದು ಹೇಳಿದ ಅವರು, ರಾಜ್ಯಾದ್ಯಂತ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಕ್ಷೇತ್ರವೂ ಅವನತಿಯತ್ತ ಸಾಗುತ್ತಿದೆ. ಕೃಷಿ ಉತ್ಪನ್ನವೂ ಕಡಿಮೆಯಾಗಿದೆ. ಸರಕಾರಗಳು ಕೃಷಿ ಉದ್ಯೋಗವನ್ನು ಘೋಷಣೆ ಮಾಡ ಬೇಕಲ್ಲದೆ, ಕೇಂದ್ರ ಸರಕಾರ ಮುದ್ರಾ ಯೋಜನೆಯಡಿ ಪ್ರತೀ ಗ್ರಾಮಕ್ಕೆ ಕನಿಷ್ಟ 20 ಲಕ್ಷ ರೂ.ಗಳ ಸಾಲ ನೀಡಬೇಕು. ಇದರಿಂದ ಗ್ರಾಮದಲ್ಲಿ 200-300 ಮಂದಿಗೆ ಕೃಷಿ ಉದ್ಯೋಗ ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಂಘಟನೆಯು ಭೂ ಮಾಲೀಕರು ಹಾಗೂ ಕೃಷಿ ಕಾರ್ಮಿಕರ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಿದ್ದು, ಅಗತ್ಯವಿರುವ ಭೂ ಮಾಲೀಕರಿಗೆ ಕಾರ್ಮಿಕರನ್ನು ಒದಗಿಸಲು ಮುಂದಾಗಲಿದೆ.

ಆ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ನೆರವಾಗಲಿದೆ ಎಂದ ಅವರು, ಸರಕಾರಗಳು ಯಾವದೇ ಕಾರಣಕ್ಕೂ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಅವಕಾಶ ನೀಡಬಾರದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಖಜಾಂಚಿ ಮಹಾದೇವ ಹಾಜರಿದ್ದರು.