ಮಡಿಕೇರಿ, ಏ. 27: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಆಶ್ರಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ವಿಧಾನಸಭಾ ಚುನಾವಣೆ ಸಂಬಂಧ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಿತು.
ಮತದಾನದ ಮಹತ್ವ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಕುಟುಂಬದ ಸದಸ್ಯರು, ಪರಿಚಿತರಿಗೆ ಮತದಾನದ ಮಹತ್ವ ಕುರಿತು ತಿಳುವಳಿಕೆ ನೀಡಿ, ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು. ಇದರಿಂದ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸಾಧ್ಯ ಎಂದು ಹೇಳಿದರು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕೊಂಡಿರುವ ಲಿಂಗತ್ವ ಅಲ್ಪ ಸಂಖ್ಯಾತರು, ಲೈಂಗಿಕ ಕಾರ್ಯಕರ್ತೆ ಯರು ತಪ್ಪದೆ ಮತದಾನ ಮಾಡುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲೇಸ್ವಾಮಿ ಮಾತನಾಡಿ, ಈ ಬಾರಿ ವಿದ್ಯುನ್ಮಾನ ಮತಯಂತ್ರದ ಜೊತೆಗೆ ವಿವಿಪ್ಯಾಟ್ ಹೊಸ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಯಾರಿಗೆ ಮತದಾನ ಮಾಡಲಾಗಿದೆ ಎಂಬದನ್ನು ಖಾತರಿ ಪಡಿಸಿಕೊಳ್ಳಲು ಇದು ಸಹಕಾರಿ ಯಾಗಿದೆ ಎಂದು ತಿಳಿಸಿದರು.
ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಮಮ್ತಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮತದಾನ ಮಾಡುವದು ಮತದಾರರ ಹಕ್ಕಾಗಿದೆ. ಆದ್ದರಿಂದ ಯಾರು ಸಹ ಮತದಾನದಿಂದ ವಂಚಿತರಾಗಬಾರದು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳದಿರುವವರಿಗೆ ಮತದಾರ ಗುರುತಿನ ಚೀಟಿ ಇಲ್ಲದವರಿಗೆ ಸ್ಥಳೀಯವಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಹಶೀಲ್ದಾರರ ಕಚೇರಿಗಳಲ್ಲಿ ಅವಕಾಶ ಮಾಡಿಕೊಡ ಲಾಗಿದೆ ಎಂದು ಮಾಹಿತಿ ನೀಡಿದರು.