ಡಾ. ರವಿ ಕರುಂಬಯ್ಯ

ಸುಂಟಿಕೊಪ್ಪ, ಏ. 27: ರಕ್ತದಾನ ಶೇಷ್ಟವಾದುದು ರಕ್ತದಾನದಿಂದ ವ್ಯಕ್ತಿಯ ಶರೀರದಲ್ಲಿನ ಕೊಬ್ಬಿನಾಂಶ ಕಡಿಮೆಯಾಗಲಿದ್ದು ಹೃದಯಾ ಘಾತವನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕರುಂಬಯ್ಯ ಹೇಳಿದರು.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯದಲ್ಲಿ ಜೆಸಿಐ ಸುಂಟಿಕೊಪ್ಪ, ಸುಂಟಿಕೊಪ್ಪ ಆಟೋ ಚಾಲಕರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಸುಂಟಿಕೊಪ್ಪ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ರಕ್ತದಾನ ಮಾಡುವದರಿಂದ ವ್ಯಕ್ತಿಯ ಶರೀರಕ್ಕೆ ಯಾವದೇ ತೊಂದರೆ ಯಾಗುವದಿಲ್ಲ. ಬದಲಿಗೆ ಹಳೆ ರಕ್ತ ಹೋಗಿ ಹೊಸ ರಕ್ತ ಬರುವದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ.

ರಕ್ತನಿಧಿ ಕೇಂದ್ರದಲ್ಲಿ ರಕ್ತವನ್ನು 35 ದಿನ ಮಾತ್ರ ಇಟ್ಟುಕೊಳ್ಳಬಹುದು. ಓರ್ವ ವ್ಯಕ್ತಿ ನೀಡಿದ ರಕ್ತ ನಾಲ್ಕು ವಿವಿಧ ಖಾಯಿಲೆ ಇರುವ ರೋಗಿಗಳಿಗೆ ನೀಡಬಹುದಾಗಿದೆ. ರಕ್ತವನ್ನು ಪಡೆದ ನಂತರ 2 ದಿನ ಕೂಲಂಕಷವಾಗಿ ಪರಿಶೀಲಿಸಲಿದ್ದು ಹೆಚ್‍ಐವಿ ಏಡ್ಸ್, ಮಲೇರಿಯಾ, ಸಿಲಿಪಿಸ್ ಖಾಯಿಲೆ ಇರುವವರ ರಕ್ತವನ್ನು ಪಡೆದಿದ್ದರೆ ಅವನ್ನು ಉಪಯೋಗಕ್ಕೆ ತೆಗೆದುಕೊಳ್ಳುವದಿಲ್ಲ ಹಾಗೆಯೇ ಆ ವ್ಯಕ್ತಿಗೆ ಇಂಥಹ ಖಾಯಿಲೆ ಇದೆ ಎಂದು ಗುಪ್ತವಾಗಿ ತಿಳಿಸಿ ಜೌಷಧಿ ಯನ್ನು ನೀಡಿ ಗುಣಮುಖವಾಗಲು ಸಹಕರಿಸಲಿದ್ದೇವೆ ಎಂದೂ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಚೇತನ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಾಣೇಶ್, ಜೇಸಿಐ ಅಧ್ಯಕ್ಷ ಅರಣ್, ಆಟೋ ಚಾಲಕ ಸಂಘದ ಅಧ್ಯಕ್ಷ ಸಂತೋಷ್ ಇದ್ದರು.

ಆಶಾ ಕಾರ್ಯಕರ್ತೆಯರು, ಆಟೋ ಚಾಲಕರು ಹಾಗೂ ಜೆಸಿಐ ಪದಾಧಿಕಾರಿಗಳು ರಕ್ತದಾನ ಮಾಡಿದರು. ಆಶಾ ಕಾರ್ಯಕರ್ತೆ ಜ್ಯೋತಿ ಭಾಸ್ಕರ್ ಸ್ವಾಗತಿಸಿ, ವಂದಿಸಿದರು.