ಗೋಣಿಕೊಪ್ಪಲು, ಏ. 27: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳನ್ನು ತೆರವು ಗೊಳಿಸಲಾಗಿತ್ತು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ತೆರವು ಗೊಳಿಸಲಾಗಿತ್ತು. ಬಿರು ಬಿಸಿಲಿನ ನಡುವೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಬಿಸಿಲನ್ನು ಲೆಕ್ಕಿಸದೆ ಸಾಗರೋಪಾದಿಯಲ್ಲಿ ಮೈದಾನಕ್ಕೆ ಆಗಮಿಸುತ್ತಿದ್ದರು. ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಮಾಡಲಿರುವ ದಸರಾ ಮೈದಾನಕ್ಕೆ ಮಧ್ಯಾಹ್ನದಿಂದಲೇ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಬರತೊಡಗಿದರು. ಗೋಣಿಕೊಪ್ಪ ನಗರದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಕಾಂಗ್ರೆಸ್ ಪಕ್ಷದ ಬಂಟಿಂಗ್ಸ್ ಹಾಗೂ ಬಾವುಟಗಳು ರಾರಾಜಿಸುತ್ತಿದ್ದವು. ಅರೆಸೇನೆ ಪಡೆಗಳು ಆಯಾಕಟ್ಟಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದುದು ಕಂಡು ಬಂತು.

ಕಾವೇರಿ ಕಾಲೇಜಿನ ಮೈದಾನಕ್ಕೆ ಹೆಲಿಕಾಪ್ಟರ್‍ನಲ್ಲಿ ಸರಿಯಾಗಿ 4 ಗಂಟೆಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಪಕ್ಷದ ಮುಖಂಡರು ಬರಮಾಡಿಕೊಂಡರು. ನಂತರ ಕಾಲೇಜು ಆವರಣದಲ್ಲಿರುವ ಮಹಾಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ

(ಮೊದಲ ಪುಟದಿಂದ) ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ, ಕರ್ನಾಟಕ ಉಸ್ತುವಾರಿ ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕಾಂಗ್ರೆಸ್ ಮುಖಂಡರಾದ ಅಜಿತ್ ಅಯ್ಯಪ್ಪ, ಪ್ರಮೋದ್ ಗಣಪತಿ, ಪೋಕುಟ್ಟಿ,ಶೇಖರ್, ಹಾಜರಿದ್ದರು. ವಿಶೇಷ ಭದ್ರತಾ ಪಡೆ ರಾಹುಲ್ ಗಾಂಧಿಯವರನ್ನು ಸುತ್ತುವರೆದಿತ್ತು. ರಾಹುಲ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ತಮ್ಮ ಮೊಬೈಲ್‍ಗಳಲ್ಲಿ ರಾಹುಲ್ ಗಾಂಧಿ ಫೋಟೋವನ್ನು ತೆಗೆಯುವ ಪ್ರಯತ್ನ ಸಾಮಾನ್ಯವಾಗಿತ್ತು. ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಆದ ಕಾರಣ ಸಹಜವಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.

ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ವಿಶೇಷ ಪಾಸ್‍ಗಳನ್ನು ಪೊಲೀಸ್ ಇಲಾಖಾ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನಿಂದ ಬಳಲುತ್ತಿದ್ದ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುತ್ತಿರುವದು ಕಂಡು ಬಂತು. ನಗರದಲ್ಲೆಡೆ ಪೊಲೀಸರು ಅರೆಸೇನೆ ಪಡೆಗಳು ಗಸ್ತು ತಿರುಗುತ್ತಿದ್ದುದು ಸಹಜವಾಗಿತ್ತು. ರಾಹುಲ್ ಗಾಂಧಿ ಭಾಷಣ ಮಾಡುವ ವೇದಿಕೆಯನ್ನು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ತಂಡ ಹಲವು ಬಾರಿ ತಪಾಸಣೆ ನಡೆಸಿತು. ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಪಕ್ಷದ ಅಭಿಮಾನಿಗಳು ವಾಹನ ಸಂಚಾರವನ್ನು ನಗರದಲ್ಲಿ ನಿಷೇದಿಸಿದ ಕಾರಣ ನಡೆದುಕೊಂಡೇ ವೇದಿಕೆಗೆ ಆಗಮಿಸುತ್ತಿದ್ದರು.

ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಸಿದ ನಂತರ ಮನೆಗೆ ತೆರಳಲು ವಾಹನಗಳಿಲ್ಲದೆ, ಬಸ್‍ಗಳಿಲ್ಲದೆ ತೊಂದರೆ ಅನುಭವಿಸಿತ್ತಿದ್ದುದ್ದು ಕಂಡು ಬಂತು. 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ನಡೆದವು. ನಗರದಲ್ಲಿ ಆಟೋ ಸಂಚಾರ ಕೂಡ ನಿಷೇಧವಾಗಿತ್ತು. ವೇದಿಕೆಯ ಹೊರ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಕಾಲೇಜು ಮೈದಾನದಲ್ಲಿ ಮಾಧ್ಯಮದವರಿಗೆ ಎಸ್‍ಪಿಜಿ ತಂಡ ಒಳ ಪ್ರವೇಶ ನೀಡಲಿಲ್ಲ. ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಜನ ಸಾಗರ ಸೇರಿತ್ತು.

ಕಳ್ಳರ ಕೈಚಳಕ..!

ಸಾವಿರಾರು ಮಂದಿ ಜಮಾಯಿಸಿದ್ದ ಸಮಾವೇಶದಲ್ಲಿ ಪ್ರಚಾರ ನಡುವೆ ಕಳ್ಳರು ಕೂಡ ತಮ್ಮ ಕೈ ಚಳಕ ತೋರ್ಪಡಿಸಿದ್ದಾರೆ. ಸಮಾವೇಶಕ್ಕೆ ಬಂದಿದ್ದ ಬೆಟ್ಟಗೇರಿಯ ಎಂ.ಎ. ಮೊೈದು ಅವರು ತಮ್ಮ ಅಕ್ಕನ ಮಗಳ ಮದುವೆ ಕಾರ್ಯಕ್ಕೆ ಸಾಮಗ್ರಿ ಖರೀದಿಗೆಂದು ಹಿಂಬದಿ ಜೇಬಿನಲ್ಲಿರಿಸಿಕೊಂಡಿದ್ದ 64 ಸಾವಿರ ರೂ. ನಗದನ್ನು ಕಳ್ಳರು ಅಪಹರಿಸಿದ್ದಾರೆ. ಅಲ್ಲದೆ, ಮತ್ತೋರ್ವರ ಪರ್ಸ್ ಕೂಡ ಕಳವಾಗಿರುವ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಮೋದಿ ಪರ ಜೈಕಾರ...!

ಗೋಣಿಕೊಪ್ಪ ವರದಿ: ರಾಹುಲ್ ಗಾಂಧಿ ಆಗಮನ ಸಂದರ್ಭ ಬಿಜೆಪಿ ಕಾರ್ಯಕರ್ತರು ಮೋದಿ ಪರ ಜೈಕಾರ ಕೂಗಿದ ಘಟನೆ ನಡೆಯಿತು.

ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಗೋಣಿಕೊಪ್ಪಲಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದು ಸರ್ಕಾರಿ ಶಾಲಾ ಮೈದಾನದಲ್ಲಿ ನಿರ್ಮಿಸಿಲಾದ ವೇದಿಕೆಯ ಕಡೆಗೆ ವಾಹನದಲ್ಲಿ ಬರುತ್ತಿದ್ದಂತೆ ಉಮಾಮಹೇಶ್ವರಿ ದೇವಸ್ಥಾನದ ಬಳಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆಯನ್ನು ಕೂಗಿದರು.

ಇಂತಹಾ ಸುಂದರ ಜಾಗ ಇನ್ನೊಂದಿಲ್ಲ

ರಾಹುಲ್‍ಗಾಂಧಿ ವೇದಿಕೆಗೆ ಬರುತ್ತಿದ್ದಂತೆಯೇ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟುಚಂಗಪ್ಪ ಅವರು ಕೊಡಗಿನ ಸಾಂಪ್ರದಾಯಿಕ ಪೀಚೆ ಕತ್ತಿ ನೀಡಿ ಗೌರವಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವುಮಾದಪ್ಪ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭ ಮೊದಲಿಗೆ ಮಾತು ಆರಂಭಿಸಿದ ರಾಹುಲ್ ಗಾಂಧಿ ಅವರು ‘ಹಿಂದೂಸ್ತಾನದಲ್ಲಿ ಇಂತಹಾ ಸುಂದರ ಜಾಗ ಮತ್ತೊಂದಿಲ್ಲ’ ಎಂದು ಹೇಳುತ್ತಿದ್ದಂತೆಯೇ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಜಯಘೋಷದೊಂದಿಗೆ ಹರ್ಷವ್ಯಕ್ತಪಡಿಸಿದರು.

ಬಸವಣ್ಣನವರ ‘ನುಡಿದಂತೆ ನಡೆ’ ವಚನ ಸಾಲು ಹೇಳುತ್ತಿದ್ದಂತೆಯೇ ಕರತಾಡನ, ಜಯಘೋಷ ಸಭೆಯಲ್ಲಿ ಮತ್ತೊಮ್ಮೆ ಮೊಳಗಿತು. ಧರ್ಮಸ್ಥಳದಲ್ಲಿ ಭೋಜನ ಮುಗಿಸಿ, ಅಪರಾಹ್ನ ಸುಮಾರು 3.55 ಗಂಟೆಗೆ ಗೋಣಿಕೊಪ್ಪಲಿಗೆ ಹೆಲಿಕಾಪ್ಟರ್‍ನಲ್ಲಿ ಆಗಮಿಸಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ, ಸಿದ್ದರಾಮಯ್ಯ, ರಾಜ್ಯ ಚುನಾವಣಾ ಉಸ್ತುವಾರಿ ವೇಣುಗೋಪಾಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿಲ್ಲಾಧ್ಯಕ್ಷ ಶಿವುಮಾದಪ್ಪ ಸ್ವಾಗತಿಸಿದರು.

ಇಂದಿನ ಕಾರ್ಯಕ್ರಮದ ಖರ್ಚು ವೆಚ್ಚ ಕೊಡಗು ಜಿಲ್ಲೆಯ ಇಬ್ಬರು ಅಭ್ಯರ್ಥಿಗಳಿಗೆ ಹೊರೆಯಾಗದಿರಲು ಅರುಣ್‍ಮಾಚಯ್ಯ ಹಾಗೂ ಚಂದ್ರಕಲಾ ಪ್ರಸನ್ನ ವೇದಿಕೆ ಏರಲಿಲ್ಲ. ಸಿದ್ದರಾಮಯ್ಯ ಭಾಷಣದ ನಂತರ ಅರುಣ್ ಮಾಚಯ್ಯ ಮಾತನಾಡಲು ಸಭೆಯಿಂದ ಕಾರ್ಯಕರ್ತರ ಒತ್ತಾಯ ಕೇಳಿ ಬಂತು. ಆದರೆ, ಅಭ್ಯರ್ಥಿಗಳು ಮಾತನಾಡುವಂತಿರಲಿಲ್ಲ. ಸುಮಾರು 7000 ಆಸನ ವ್ಯವಸ್ಥೆ ಮಾಡಲಾಗಿದ್ದು ಮೈದಾನ ಭರ್ತಿಯಾಗಿತ್ತು. ಜಿಲ್ಲೆಯ ಮೂರು ತಾಲೂಕುಗಳಿಂದಲೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಆಗಮಿಸಿದ್ದು, ಸಭೆಯ ನಂತರ ಮೈದಾನದಿಂದ ಮುಖ್ಯರಸ್ತೆಯಲ್ಲಿಗೆ ತೆರಳುವ ಸಂದರ್ಭ ವ್ಯಾಪಕ ನೂಕು ನುಗ್ಗಲು ಕಂಡು ಬಂತು. ಯಾವದೇ ಅಹಿತಕರ ಘಟನೆ ನಡೆಯದೆ, ವ್ಯಾಪಕ ಪೆÇಲೀಸ್ ಭದ್ರತೆ ಹಾಗೂ ಮೈದಾನಕ್ಕೆ ಪ್ರವೇಶಿಸುವ ಪ್ರತಿಯೋರ್ವರನ್ನೂ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದರು. ಇದೇ ಸಂದರ್ಭ ಪತ್ರಕರ್ತರನ್ನೂ ಬಿಡದೆ, ಮೆಟಲ್ ಡಿಟೆಕ್ಟರ್ ಕ್ಯಾಮೆರಾ ಇತ್ಯಾದಿ ಪರಿಕರಗಳನ್ನೂ ಪರಿಶೀಲಿಸಿ ಒಳಬಿಡಲಾಯಿತು.