ವೀರಾಜಪೇಟೆ, ಏ. 27: ಮಾನವನು ಶುದ್ಧ ಗಾಳಿ, ನೀರು, ಆಹಾರಕ್ಕಾಗಿ ನಿರಂತರ ಪರಿಸರವನ್ನು ಅವಲಂಬಿಸುತ್ತಿರುವದರಿಂದ ಇದು ಆರೋಗ್ಯಕ್ಕೂ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ನೆಲ, ಜಲದ ರಕ್ಷಣೆ ಮಾಡಬೇಕಾಗಿದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ವಿಶ್ವ ಭೂ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೋಹನ್ ಪ್ರಭು ಮಾತನಾಡಿ, ಕೊಡಗು ಜಿಲ್ಲೆಯನ್ನು ದಕ್ಷಿಣ ಕಾಶ್ಮೀರ ಎನ್ನುತ್ತಾರೆ ಇಲ್ಲಿನ ಪ್ರಕೃತಿಯ ಸೊಬಗು ನೋಡುವವರನ್ನು ಆಕರ್ಷಿಸುತ್ತದೆ. ಇಂತಹ ಪರಿಸರದಲ್ಲಿ ಪ್ರವಾಸಿಗರು ಬಂದು ರಸ್ತೆ ಬದಿ ಕಾಡು ಅಂಚಿನಲ್ಲಿ ಕಸವನ್ನು ಹಾಕುತ್ತಿರುವದು ಕಂಡುಬರುತ್ತದೆ. ಪರಿಸರದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಭಾರತದ ಸಂವಿಧಾನ ಹಾಗೂ ಬಸವಣ್ಣನವರ ವಚನಗಳನ್ನು ಪ್ರತಿಪಾದಿಸಿ ಕಾನೂನು ರಚನೆ ಮಾಡಲಾಗಿದೆ. ಪ್ರತಿಯೊಬ್ಬರು ಕಾನೂನನ್ನು ಪಾಲಿಸಬೇಕು. ಕಾನೂನು ಸೇವೆಗಳ ಸಮಿತಿಯಿಂದ ಎಲ್ಲ ವರ್ಗದ ಜನರಿಗೆ ಉಚಿತ ಕಾನೂನು ಅರಿವು ನೀಡಲಾಗುತ್ತಿದೆ. ಪ್ರತಿಯೊಬ್ಬರು ಇದನ್ನು ಸದುಪಯೋಗಪಡಿಸಿ ಕೊಳ್ಳುವಂತಾಗ ಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರಗಳು ಕಾಣೆಯಾಗುತ್ತವೆ. ಗಿಡಗಳನ್ನು ಎ¯್ಲ ಕಡೆಗಳಲ್ಲಿಯು ನೆಡುವುದು ಸಹಜ, ಆದರೆ ಗಿಡ ನೆಟ್ಟರೆ ಸಾಲದು ಅದನ್ನು ಪೋಷಿಸಿ ಬೆಳೆಸಬೇಕು. ಕೊಡಗಿನಲ್ಲಿ ಅನೇಕ ದೇವರ ಕಾಡುಗಳಿದ್ದು ಅದನ್ನು ಒತ್ತುವರಿ ಮಾಡದಂತೆ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ. ಅರಣ್ಯದಿಂದ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳುವ ನಾವು ಕಾಡನ್ನು ನಿರ್ಲಕ್ಷಿಸದೆ ರಕ್ಷಿಸಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ, ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸಿಬ್ಬಂದಿ ಬೇಬಿ ಸ್ವಾಗತಿಸಿದರು. ವಕೀಲೆ ಅನುಪಮ ಕಿಶೋರ್ ವಂದಿಸಿದರು.