ಸಿದ್ದಾಪುರ, ಏ. 28: ಮತದಾರರು ತಮ್ಮ ಮತಗಳನ್ನು ಆಮಿಷಗಳಿಗೆ ಮಾರಾಟ ಮಾಡಬಾರದು, ಮತ್ತೆ ನಿಮ್ಮಗಳ ಸಮಸ್ಯೆಯಗಳನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲದಾಗುತ್ತದೆ ಎಂದು ಖ್ಯಾತ ಚಿತ್ರನಟಿ ಪೂಜಾಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ, ಗುಡ್ಲೂರು, ಮೂಡಬಯಲು ವ್ಯಾಪ್ತಿಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಪರ ಮನೆ ಮನೆಗೆ ತೆರಳಿ ಮತ ಯಾಚಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳು ಮತಗಳನ್ನು ಪಡೆಯಲು ಹಲವಾರು ಆಮಿಷಗಳನ್ನು ಒಡ್ಡುತ್ತಾರೆ. ಇದಕ್ಕೆ ಮತದಾರರು ಮಣಿಯದೆ ಜೆ.ಡಿ.ಎಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.
ಈ ಬಾರಿ ರಾಜ್ಯದಲ್ಲಿ ಮತದಾರರು ಪ್ರಾದೇಶಿಕ ಪಕ್ಷದತ್ತ ಒಲವು ತೋರಿಸಿದ್ದು, ಈ ಬಾರಿ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬರುವದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಎರಡೂ ಸ್ಥಾನಗಳಲ್ಲೂ ಜೆ.ಡಿ.ಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತರಿಗೆ ಹಾಗೂ ಕಾರ್ಮಿಕರ ಪರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇದನ್ನು ಗಮನಿಸಿರುವ ಮತದಾರರು ಜೆ.ಡಿ.ಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿಯಾಗಿರುವ ಸಂಕೇತ್ ಪೂವಯ್ಯ ಅವರು ಜಿಲ್ಲೆಯ ಯಾವುದೇ ಭಾಗದಲ್ಲಿ ಕಾಡಾನೆ ಹಾಗೂ ಹುಲಿ ಧಾಳಿ ನಡೆಸಿದ ಸಂದರ್ಭ ಸ್ಥಳಕ್ಕೆ ಸಕಾಲಕ್ಕೆ ತೆರಳಿ ಸ್ಪಂದನೆ ನೀಡುತ್ತಿದ್ದಾರೆ. ಇವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಮತದಾರರು ಇವರನ್ನು ಬೆಂಬಲಿಸಲಿದ್ದಾರೆ ಎಂದರು.
ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಜೆ.ಡಿ.ಎಸ್ ಪಕ್ಷವು ಸ್ಪಂದಿಸಿದ್ದು, ರೈತರ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತಾಪಿ ವರ್ಗ ಹಾಗೂ ಕಾರ್ಮಿಕರು ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭ ವೀರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಎಸ್ ಮತೀನ್, ರಾಜ್ಯ ಮುಖಂಡ ನರಸಿಂಹಮೂರ್ತಿ, ಮುಖಂಡರುಗಳಾದ ಮಂಜುನಾಥ್, ಗೋವಿಂದ, ದೇವರಾಜ್, ಸೋಮಯ್ಯ, ವಸಂತ, ರಾಮಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.,