ಸೋಮವಾರಪೇಟೆ, ಏ. 28: ಪ್ರಸಕ್ತ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಒಲವಿದ್ದು, ತನ್ನ ಜಯ ನಿಶ್ಚಿತ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಶಾಸಕರ ನಿಧಿಯಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ಕೇಂದ್ರದಿಂದಲೂ ಅನುದಾನವನ್ನು ತರುವ ಪ್ರಯತ್ನ ಮಾಡಬೇಕು. ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿನ ಶಾಸಕರು ಜನಮೆಚ್ಚುವ ಕಾರ್ಯಕ್ರಮಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ತಾನು ಶಾಂತಳ್ಳಿ ಹೋಬಳಿ ಸೇರಿದಂತೆ ಕೆಲ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಸೇರಿಸಿದ್ದೆ. ಬಹುತೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಪಟ್ಟಣದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಂದಾಗಿ ಹಣ ಸಂಗ್ರಹಿಸಿ ಅರ್ಧ ಕಾಮಗಾರಿ ಪೂರ್ಣಗೊಂಡಿತ್ತು. ಇದೀಗ ರಾಜಕೀಯ ದ್ವೇಷದಿಂದ ಅಪೂರ್ಣಗೊಂಡಿದೆ ಎಂದು ದೂರಿದರು.
ಹಾರಂಗಿ ಜಲಾಶಯದಿಂದ ಸೋಮವಾರಪೇಟೆಗೆ ಕುಡಿಯುವ ನೀರಿನ ಯೋಜನೆ ಕಾರ್ಯಗತ ಗೊಳಿಸಿದ್ದೇನೆ. 6 ಕೋಟಿ ರೂ.ಹಣವನ್ನು ಬಿಡುಗಡೆಗೊಳಿಸಲು ಎಲ್ಲ ಪ್ರಯತ್ನ ಮಾಡಿದ್ದೇನೆ. ಸೋಮವಾರಪೇಟೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಎರಡೂವರೆ ಕೋಟಿ ರೂ. ಹಣ ಬಿಡುಗಡೆ ಗೊಳಿಸಲು ಪ್ರಯತ್ನಿಸಿದ್ದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಈಗ ಮಳೆಗಾಲದಲ್ಲಿ ಸೋರುತ್ತಿದೆ ಎಂದರು.
ಇದೇ ಸಂದರ್ಭ ಕುಸುಬೂರು ಗ್ರಾಮದ ಗಿರೀಶ್, ಬಿಜೆಪಿಯ ಪಿ.ಎಂ.ಮಂಜುನಾಥ್, ಚಂದನ್, ರಂಜು, ಹರೀಶ್ ನೇತೃತ್ವದಲ್ಲಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಕ್ಷೇತ್ರ ಯುವ ಜನತಾದಳದ ಅಧ್ಯಕ್ಷ ಪ್ರವೀಣ್, ನಗರ ಸಮಿತಿ ಅಧ್ಯಕ್ಷ ಕಮಲ್, ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್‍ಗೌಡ ಮತ್ತಿತರರು ಇದ್ದರು.