ಮಡಿಕೇರಿ, ಏ. 28 : ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ಅಧಿಕಾರಿಗಳು ಚುನಾವಣಾ ಕಾರ್ಯದ ನೆಪವೊಡ್ಡಿ ಯಾವದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಮೂಡಾ ಅಧ್ಯಕ್ಷರಾದ ಎ.ಸಿ.ಚುಮ್ಮಿದೇವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಚುನಾವಣಾ ಸೇವೆಯಲ್ಲಿ ಕಾರ್ಯ ನಿರತರಾಗುವುದು ಸಾಮಾನ್ಯ. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಎದುರಾದಾಗ ಅಧಿಕಾರಿಗಳು ಸ್ಪಂದಿಸುವುದು ಅನಿವಾರ್ಯ. ಆದರೆ ನಗರ ವ್ಯಾಪ್ತಿಯಲ್ಲಿ ಶುಚಿತ್ವ ಸೇರಿದಂತೆ ಅಗತ್ಯ ಕಾರ್ಯಗಳು ನಡೆಯದೆ ಸಾರ್ವಜನಿಕರು ಸಂಕಷ್ಟವನ್ನು ಎದುರಿಸುತ್ತಿದ್ದರೂ ಅಧಿಕಾರಿಗಳು ಚುನಾವಣೆ ಕೆಲಸ ಎಂದು ನೆಪ ಹೇಳಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.
ನಗರದ ವಾರ್ಡ್ ಸಂ.21 ರ ಗೌಡ ಸಮಾಜ ವ್ಯಾಪ್ತಿಯ ರಸ್ತೆಗಳು ಯುಜಿಡಿ ಕೆಲಸದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ಇಂಜಿನಿಯರ್ ಅವರನ್ನು ಸಂಪರ್ಕಿಸಿದರೆ ಚುನಾವಣಾ ಕಾರ್ಯದ ನೆಪ ಒಡ್ಡುತ್ತಿದ್ದಾರೆ. ನಗರದ ವಿವಿಧ ವಾರ್ಡ್ಗಳ ರಸ್ತೆಗಳು ಯುಜಿಡಿ ಕರ್ಮಕಾಂಡದಿಂದ ಹಾಳಾಗಿದ್ದು, ಮಳೆಗಾಲಕ್ಕಿಂತ ಮೊದಲೇ ಡಾಂಬರೀಕರಣ ಮಾಡದಿದ್ದರೆ ಸಾರ್ವಜನಿಕರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಗುತ್ತಿಗೆದಾರರು ಸಂಬಂಧಪಟ್ಟ ಇಂಜಿನಿಯರ್ಗಳು ದೂರವಾಣಿಗೆ ಲಭ್ಯವಾಗದೆ ಇರುವದರಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಹದಗೆಟ್ಟ ರಸ್ತೆಗಳಿಂದ ಅಪಘಾತಗಳು ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತದೆ ಎಂದು ಚುಮ್ಮಿದೇವಯ್ಯ ಎಚ್ಚರಿಕೆ ನೀಡಿದ್ದಾರೆ.
ಕಸ ವಿಲೇವಾರಿಯೂ ಸಕಾಲದಲ್ಲಿ ನಡೆಯದೆ ಇರುವದರಿಂದ ವಿವಿಧ ಬಡಾವಣೆಗಳಲ್ಲಿ ತ್ಯಾಜ್ಯಗಳು ರಸ್ತೆಗಳಲ್ಲೇ ಹರಡಿರುವದು ಕಂಡು ಬಂದಿದೆ. ಮನೆ ಮನೆ ಕಸ ಸಂಗ್ರಹ ಕೂಡ ಸಮರ್ಪಕವಾಗಿ ನಡೆಯದೆ ಇರುವದರಿಂದ ಸಾರ್ವಜನಿಕರು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬೀದಿದೀಪ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿರುವ ನಗರಸಭೆಯ ಅಧಿಕಾರಿಗಳು ಚುನಾವಣೆಯ ನೆಪವೊಡ್ಡಿ ಅಸಡ್ಡೆ ತೋರುತ್ತಿದ್ದಾರೆ ಎಂದು ಚುಮ್ಮಿದೇವಯ್ಯ ಆರೋಪಿಸಿದ್ದಾರೆ.
ಸಾರ್ವಜನಿಕರಿಗೆ ಯಾವದೇ ರೀತಿಯ ತೊಂದರೆಗಳು ಎದುರಾಗದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.