ಕುಶಾಲನಗರ, ಏ. 28: ಜೀಪೊಂದು ಡಿಕ್ಕಿಯಾದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧನೋರ್ವ ಮೃತಪಟ್ಟ ಘಟನೆ ಬೈಚನಹಳ್ಳಿ ಬಳಿ ನಡೆದಿದೆ. ನೆರೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದ ನಿವಾಸಿ ಚಂದ್ರಪ್ಪ (65) ಎಂಬಾತ ಮೃತ ವ್ಯಕ್ತಿ.
ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಬೊಲೆರೊ (ಕೆಎ.41.ಎನ್.6348) ಜೀಪು ಬೈಚನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಚಂದ್ರಪ್ಪನನ್ನು ಸಾರ್ವಜನಿಕರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ದ ಕೆಲವೇ ನಿಮಿಷಗಳಲ್ಲಿ ಚಂದ್ರಪ್ಪ ಮೃತಪಟ್ಟಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸರು ಜೀಪ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಚಂದ್ರಪ್ಪನಿಗೆ ಸಕಾಲದಲ್ಲಿ ವೈದ್ಯರು ಚಿಕಿತ್ಸೆ ನೀಡದ ಕಾರಣ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಸರಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆಯಿತು.
ಆಸ್ಪತ್ರೆ ಬಳಿ ನೆರೆದಿದ್ದ ಸಾರ್ವಜನಿಕರು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮಾಧಾನಿಸಿ ಪರಿಸ್ಥಿತಿ ತಿಳಿಗೊಳಿಸಿದರು.