ಗೋಣಿಕೊಪ್ಪಲು, ಏ.28: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಹಾಡಿ ವಾಸ್ತವ್ಯ ಮಾಡುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಪರವಾಗಿ ಮನೆ ಮನೆ ಮತಯಾಚನೆ ನಡೆಸಿದರು. ದ.ಕೊಡಗಿನ ಚನ್ನಯ್ಯನ ಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಸವಿನ ಕೆರೆ ಗಿರಿಜನರ ಹಾಡಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ ನಟಿ ಪೂಜಾ ಗಾಂಧಿ ಮುಂಜಾನೆ ಹಾಡಿ ನಿವಾಸಿಗಳ ಮನೆ ಮನೆ ಭೇಟಿ ನೀಡಿ ಈ ಬಾರಿ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.ಕೆಸವಿನ ಕರೆ ಹಾಡಿಯ ನಿತಿನ್ ಎಂಬ ಯುವಕನ ಮನೆಯಲ್ಲಿ ವಾಸ್ತವ್ಯ ಹೂಡಿದ ನಟಿ ಪೂಜಾ ಗಾಂಧಿ ಗಿರಿಜನರ ಸಮಸ್ಯೆಗಳನ್ನು ಹತ್ತಿರದಿಂದ ಪರಿಶೀಲಿಸುವ ಮೂಲಕ ಗಿರಿಜನರಿಗಿರುವ ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಖುದ್ದು ವೀಕ್ಷಣೆ ಮಾಡಿದರು
ಸಂಜೆಯ ವೇಳೆ ಹಾಡಿಗೆ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ವಾಸ್ತವ್ಯ ಹೂಡುವ ಯುವಕನ ಮನೆಯ ಮುಂದೆ ಹಾಡಿ ನಿವಾಸಿಗಳು ಬಂದು ಸೇರಿದರು. ನಟಿ ಪೂಜಾ ಗಾಂಧಿ ಆಗಮಿಸುತ್ತಿದ್ದಂತೆಯೇ ಸಾಂಪ್ರದಾಯಿಕವಾಗಿ ನಟಿಯನ್ನು ಹಾಡಿಗೆ ಸ್ಥಳೀಯರು ಸ್ವಾಗತಿಸಿದರು. ವಿದ್ಯುತ್ಚ್ಛಕ್ತಿ ಇಲ್ಲದಿದ್ದರೂ ಸೋಲಾರ್ ಲೈಟ್ನ ಸಹಾಯದಿಂದ ಮನೆಯ ಮುಂಭಾಗ ಸೇರಿದ್ದ ಗಿರಿಜನರನ್ನು ನಟಿ ಆತ್ಮೀಯವಾಗಿ ಮಾತನಾಡಿಸಿ ಹಾಡಿಯ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ನಂತರ ಹಾಡಿಯ ನಿವಾಸಿ ಯರವರ ಚೋಮಿ, ನಾಗಿ ಅವರು ತಾವೇ ತಯಾರು ಮಾಡಿದ ಅಕ್ಕಿರೊಟ್ಟಿ, ಸೊಪ್ಪು ಪಲ್ಯ, ಕಾರ ಚಟ್ನಿ, ತರಕಾರಿ ಸಾಂಬಾರಿನೊಂದಿಗೆ ರಾತ್ರಿಯ
(ಮೊದಲ ಪುಟದಿಂದ) ಬೋಜನ ಸವಿದರು. ಮನೆಯ ಒಳಗೆ ಚಾಪೆಯಲ್ಲಿ ಕುಳಿತು ಬಾಳೆಲೆಯಲ್ಲಿ ಬಡಿಸಿದ್ದ ಆಹಾರವನ್ನು ನಟಿ ಪೂಜಾಗಾಂಧಿ ಸವಿದರು. ಇವರೊಂದಿಗೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಕೂಡ ಗಿರಿಜನರು ಬಡಿಸಿದ ಊಟವನ್ನು ಸವಿದರು. ಹಾಡಿ ಮಹಿಳೆಯರೊಂದಿಗೆ ಬೆರೆತ ಪೂಜಾಗಾಂಧಿ ಹಾಡಿಯಲ್ಲಿರುವ ಮಹಿಳೆಯರ ಜೀವನ ಶೈಲಿಯ ಬದುಕನ್ನು ಆಲಿಸಿದರು.
ಮಾದ್ಯಮದೊಂದಿಗೆ ಮಾತನಾಡಿದ ನಟಿ ಪೂಜಾಗಾಂಧಿ ಗಿರಿಜನರ ಬದುಕು ಇಷ್ಟೊಂದು ದುಸ್ಥರವಿದೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನನ್ನು ಆದಿವಾಸಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಗಿರಿಜನರ ಬದುಕಿನ ಕಷ್ಟವನ್ನು ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯವರ ಗಮನಕ್ಕೆ ತರುತ್ತೇನೆ. ಸಮಸ್ಯೆಗಳ ವಿವರವನ್ನು ನೀಡುತ್ತೇನೆ ಎಂದರು.
ಅಭ್ಯರ್ಥಿ ಸಂಕೇತ್ ಪೂವಯ್ಯ ಮಾತನಾಡಿ ಇಲ್ಲಿಯ ನೈಜ ಗಿರಿಜನರ ಸಮಸ್ಯೆಗಳು ಹಲವು ವರ್ಷಗಳಿಂದ ಹಾಗೆಯೇ ಉಳಿದಿವೆ. ಮುಂದೆ ಸರ್ಕಾರ ಬದಲಾಗುವ ಸಮಯದಲ್ಲಿ ಇವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವದೆಂದರು. ಹಾಡಿ ವಾಸ್ತವ್ಯ ಸಂದರ್ಭ ಸುತ್ತಮುತ್ತಲಿನ ಗ್ರಾಮಾಸ್ಥರು ಹಾಜರಿದ್ದರು.ನಟಿ ಪೂಜಾಗಾಂಧಿಯವರೊಂದಿಗೆ ಯುವಕ ಯುವತಿಯರು ಮೊಬೈಲ್ನಲ್ಲಿ ಸೆಲ್ಫಿ ಪೊಟೋ ತೆಗೆಸಿಕೊಂಡು ಖುಷಿ ಪಟ್ಟರು.