ಮಡಿಕೇರಿ, ಏ. 28: ಬಾಲಕರ, ಬಾಲಕಿಯರ ಬಾಲಮಂದಿರ ಹಾಗೂ ನಗರದ ಪುಟ್ಟ ಬಾಲಕ ಬಾಲಕಿಯರ ಹದಿನೈದು ದಿನದ ‘ಕಲಿಕೆಗೊಂದು ವೇದಿಕೆ’ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಇಂದು ಪ್ರೇಕ್ಷಕರ ಮನ ನಾಟುವ ಹಾಡು- ನಾಟಕ- ನೃತ್ಯಗಳು ಆಕರ್ಷಿಸಿದವು.ಶಿಶು ಕಲ್ಯಾಣ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನೀನಾಸಂ ತಂಡದ ಚೇತನ್, ಸುನೀಲ್, ಸೋಮಶೇಖರ್, ಭಾಲಭವನದ ಸಿಬ್ಬಂದಿ ಸಜಿತ್ ಮತ್ತು ಹರೀಶ್ ಸುಮಾರು 120 ಮಕ್ಕಳನ್ನು ನೃತ್ಯ, ಹಾಡು, ಚಿತ್ರಕಲೆ, ಕ್ರಾಫ್ಟ್, ಮುಖವಾಡ, ಜೇಡಿಮಣ್ಣಿನ ಕಲೆ, ಯೋಗ ಇತ್ಯಾದಿ ಚಟುವಟಿಕೆಗಳಲ್ಲಿ ಬೆರಗಾಗುವ ರೀತಿ ತಯಾರು ಮಾಡಿದ್ದಾರೆ.ಪರಿಸರ ಆಧಾರಿತ ನಾಟಕವೊಂದನ್ನು ಅಭಿನಯಿಸಿದ ಮಕ್ಕಳು ಪ್ರೇಕ್ಷಕರ ಮನ ಸೆರೆಹಿಡಿದರು. ನಾಟಕದ ಮೂಲಕ ಪರಿಸರದ ಮೌಲ್ಯ ಹಾಗೂ ಆತಂಕವನ್ನು ಗುಬ್ಬಿಯ ಪಾತ್ರ ಹಾಗೂ ಪುಟ್ಟ ಎಂಬ ಬಾಲಕನ ಪಾತ್ರ ಮಾಡಿದ ಇಬ್ಬರು ವಿದ್ಯಾರ್ಥಿಗಳು ಮನ ಮಿಡಿಯುವಂತೆ ನಟಿಸಿದರು. ಭೂತಾಯಿಯ ಮಮತೆ, ಪರಿಸರ ಕಾಳಜಿಯೊಂದಿಗೆ ‘ಯಾರವ್ವ ನಮಗ, ನಮ್ಮವ್ವ ನೀನೆ ಬಳಗ’ ಎಂಬ ಹಾಡಿನೊಂದಿಗೆ ನಾಟಕ ಮುಗಿದಾಗ ಸಭಿಕರ ಮನ ತಲ್ಲಣಿಸಿತು. ನಾಟಕದ ಪ್ರತಿ ಹೆಜ್ಜೆಯಲ್ಲೂ ನೀನಾಸಂ ತಂಡದ ಚತುರತೆ ಮತ್ತು ವಿಶೇಷತೆ ಕಂಡುಬರುತ್ತಿತ್ತು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮಮ್ತಾಜ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸಿ.ಇ.ಓ. ಪ್ರಶಾಂತ್ ಕುಮಾರ್ ಮಿಶ್ರಾ, ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಅಗ್ನಿಶಾಮಕ ದಳದ ಅಧಿಕಾರಿ ಚಂದನ್, ಅರುಣ್ ಸ್ಟೋರ್ಸ್ ಮಾಲೀಕ ಅರುಣ್, ಬಿಇಒ ಗಾಯತ್ರಿ ಉದ್ಘಾಟನಾ ದೀಪ ಬೆಳಗಿಸಿದರು.