ವೀರಾಜಪೇಟೆ, ಏ. 28: ಕ್ರೀಡೆಯಿಂದ ಮನೋವಿಕಾಸಕ್ಕೆ ಉತ್ತೇಜನ ದೊರೆಯುತ್ತದೆ. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಏಕಾಗ್ರತೆ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕ ಪೊಕ್ಕಳಿಚಂಡ ಕೆ. ಪೊನ್ನಪ್ಪ ಹೇಳಿದರು.ಕೊಡಗು ಹೆಗ್ಗಡೆ ವಿದ್ಯಾಭಿವೃದ್ದಿ ಸಂಘ ಮತ್ತು ಸಮಾಜದ ವತಿಯಿಂದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 17ನೇ ವರ್ಷದ ಕ್ರೀಡಾ ಕೂಟದ ಪ್ರಯುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವಂತೆ ಕ್ರೀಡೆಗೂ ಪ್ರೊತ್ಸಾಹವನ್ನು ನೀಡಬೇಕು. ದಿನಕ್ಕೆ ಒಂದು ತಾಸು ಆಟವಾಡಿದರೆ ಮನಸ್ಸು ಚುರುಕಾಗಿ ಏಕಾಗ್ರತೆಯಿಂದ ವಿದ್ಯಾಭ್ಯಾಸಕ್ಕೆ ಉಪಯೋಗವಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ದುಶ್ಚಟಗಳಿಗೆ ಬಲಿಯಾಗುವದು ಕಡಿಮೆ. ಸಮುದಾಯದ ಇಂದಿನ ಯುವ ಸಮೂಹ ಮುಂದೆ ಬಂದು ಜನಾಂಗದ ಏಳಿಗೆ ಹಾಗೂ ಪ್ರಗತಿಗಾಗಿ ಶ್ರಮಿಸಬೇಕು ಎಂದರು.
ರಾಜ್ಯ ಅಗ್ನಿಶಾಮಕದಳದ ನಿರ್ದೇಶಕ ಹಾಗೂ ತುರ್ತು ಸೇವೆಯ ನಿರ್ದೇಶಕ ಕೊಪ್ಪಡ ರಮೇಶ್ ಮಾತನಾಡಿ ಸಮುದಾಯದ ಜನಸಂಖ್ಯೆ ಕಡಿಮೆಯಾದರೂ ಹೆಗ್ಗಡೆ ಜನಾಂಗದವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುತ್ತಿರುವದು
(ಮೊದಲ ಪುಟದಿಂದ) ಶ್ಲಾಘನೀಯ ಎಂದು ಹೇಳಿದರು.
ಉಪಾಧ್ಯಕ್ಷ ಕೊರಕುಟ್ಟೀರ ಸ.ರಾ.ಚಂಗಪ್ಪ ಪ್ರಾಸ್ತಾವಿಕ ಮಾತನಾಡಿ ನಮ್ಮ ಜನಾಂಗ ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿದೆ. ಸರ್ಕಾರದಿಂದ ಹಿಂದುಳಿದ ವರ್ಗದ ಪ್ರಮಾಣಪತ್ರ ಲಭಿಸಿದೆ. ಕ್ರೀಡೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಇತರ ಸಮುದಾಯಕ್ಕೆ ನೀಡುವಂತಹ ಸಹಾಯ ಧನವನ್ನು ನಮಗೂ ನೀಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕು ಮೊದಲು ಧ್ವಜಾರೋಹಣ ನೆರವೇರಿಸಿದರು. ಕ್ರೀಡಾ ಸಮಿತಿ ಸಂಚಾಲಕ ಪಡಿಞರಂಡ ಪ್ರಭುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯಾದ್ಯಂತ 10 ವಲಯಗಳು ಭಾಗವಹಿಸಿದ್ದವು.