ಸಿದ್ದಾಪುರ, ಏ. 28: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ದುಬಾರೆ ಮೀಸಲು ಅರಣ್ಯದಲ್ಲಿ ನಡೆದಿದೆ.

ಕಳೆದ ಒಂದುವರೆ ತಿಂಗಳಿನಿಂದ ಗಂಡಾನೆಯೊಂದು ಗುಂಡೇಟಿನಿಂದ ಗಾಯಗೊಂಡು, ಅನಾರೋಗ್ಯದಿಂದ ಬಳಲುತ್ತಿತ್ತು. ಅರಣ್ಯ ವನ್ಯಜೀವಿ ವೈದ್ಯಾಧಿಕಾರಿ ಮುಜೀಬ್ ಅವರ ನೇತೃತ್ವದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸಾಕಾನೆಗಳ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಕಾಡಾನೆಯ ಕಾಲಿಗೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಕುಂಟುತ್ತಿತ್ತು. ಚಿಕಿತ್ಸೆ ನೀಡಲು ಮುಂದಾಗುವ ಸಂದರ್ಭ ಕಾಡಾನೆಯು ರೋಶದಿಂದ ಚಿಕಿತ್ಸೆಗೆ ಅಡ್ಡಿಪಡಿಸುತ್ತಿತ್ತು ಎಂದು ತಿಳಿದುಬಂದಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕಾಡಾನೆಯು ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಸಂದರ್ಭ ಕಾಡಾನೆಯ ಕಿವಿ ಹಾಗೂ ಬೆನ್ನಿನಲ್ಲಿ ಗುಂಡಿನ ಗುರುತುಗಳು ಪತ್ತೆಯಾಗಿದ್ದು, ಸೋಲಾರ್ ಬೇಲಿಗೆ ತಗುಲಿ ಸೊಂಡಿಲಿಗೂ ಕೂಡ ಗಾಯಗೊಂಡಿರುವದುಗೋಚರಿಸಿತ್ತು.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ, ವನ್ಯಜೀವಿ ವೈದ್ಯಾಧಿಕಾರಿ ಮುಜೀಬ್, ಆರ್.ಆರ್.ಟಿ ತಂಡ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತ್ತು.