ಮಡಿಕೇರಿ, ಏ. 28: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮಠಮಂದಿರಗಳನ್ನು ಮುಟ್ಟುಗೋಲು ಹಾಕಲು ಚಿಂತನೆ ಹರಿಸುವ ಮೂಲಕ ಸಂಸ್ಕøತಿ ಹಾಗೂ ಆಧ್ಯಾತ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡಿದ್ದರಿಂದಲೇ ರಾಜ್ಯ ಪ್ರಗತಿ ಸಾಧಿಸಿಲ್ಲ ಎಂದು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದೂರಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಬಿಜೆಪಿ ಬಹಿರಂಗ ಮತಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಕೋಮು ಗಲಭೆ, ಅತ್ಯಾಚಾರ, ಕೊಲೆ-ಸುಲಿಗೆ ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು. ಶಾಂತಿಗೆ ಹೆಸರುವಾಸಿಯಾಗಿದ್ದ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮೂಲಕ ಅಶಾಂತಿ ಹರಡಲು ಕಾರಣರಾದರು. ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹಲವಾರು ಜನಪ್ರಿಯ ಯೋಜನೆಗಳ ಮೂಲಕ ರಾಜ್ಯ ಮತ್ತು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿತ್ತು. ಜಿಲ್ಲೆಯಲ್ಲಿ ಶಾಸಕರಾಗಿದ್ದ ತಾನು ಮತ್ತು ಕೆ.ಜಿ. ಬೋಪಯ್ಯ ರೂ. 1,800 ಕೋಟಿ ಅನುದಾನ ತಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಕೇಂದ್ರ, ಸೈನಿಕ ಕಾಲೇಜುಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದೇವೆ. ಆದರೆ, ಕಾಂಗ್ರೆಸ್ ಸರಕಾರ ಅನುದಾನ ನೀಡದ ಕಾರಣ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಂತಹ ದುರಾಡಳಿತ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದು ಬಿಜೆಪಿಗೆ ಮತ ನೀಡಿ ಮತ್ತೊಮ್ಮೆ ಬಿಜೆಪಿ ಸರಕಾರ ಆಡಳಿತ ನಡೆಸಲು ಅವಕಾಶ ನೀಡಿ ಎಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದರು.
ಬಸವಪಟ್ಟಣ ಮಠದ ಸ್ವತಂತ್ರ ಬಸವಲಿಂಗಸ್ವಾಮೀಜಿ ಮಾತನಾಡಿ, ಯಾವದೇ ಸರಕಾರವಾಗಲಿ ಸಮಾಜದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕøತಿಕವಾಗಿ ಸಮಾನತೆಯನ್ನು ಕಲ್ಪಿಸಿಕೊಡುವಂತಹ ಆಡಳಿತವನ್ನು ಕೊಡಬೇಕು. ಧರ್ಮವನ್ನು ಒಡೆಯುವಂತಹ ಕಾರ್ಯವನ್ನು ಮಾಡಬಾರದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿದರು. ಪ್ರಮುಖರಾದ ಭರತ್ ಕುಮಾರ್, ಸರೋಜಮ್ಮ, ಉಷಾ ತೇಜಸ್ವಿ, ಜೆ.ಸಿ. ಶೇಖರ್, ಜಲಜಾಶೇಖರ್, ಭುವನೇಶ್ವರಿ, ಎಸ್.ಎನ್. ರಘು, ಕೆ.ವಿ. ಮಂಜುನಾಥ್, ಮಹಮ್ಮದ್ ಗೌಸ್ ಮತ್ತಿತರರು ಉಪಸ್ಥಿತರಿದ್ದರು.