ಮಡಿಕೇರಿ, ಏ. 28: ಕರ್ನಾಟಕದ ವಿಧಾನ ಸಭಾ ಚುನಾವಣೆ ಸಂದರ್ಭ ರಾಜ್ಯದಲ್ಲಿ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಬಿರುಸಿನ ತಪಾಸಣೆ ನಡೆಯುತ್ತಿದೆ. ಇದು ಅತ್ಯಗತ್ಯ ಕಾರ್ಯವಾಗಿದೆ. ಆದರೆ ತಪಾಸಣೆ ಸಂದರ್ಭ ವಿಳಂಬವಾಗುವದು ಹಾಗೂ ಸಾರ್ವಜನಿಕರ ಮಟ್ಟಿಗೆ ಕಟು ಧೋರಣೆ ತಾಳುವದು ಸರಿಯಲ್ಲ. ಅಧಿಕಾರಿಗಳು ಮುಂದೆ ಮೃದು ಧೋರಣೆ ಅನುಸರಿಸುವದರೊಂದಿಗೆ ತಪಾಸಣಾ ಕೇಂದ್ರಗಳಲ್ಲಿ ಸನಿಹದ ಸ್ಥಳಗಳಲ್ಲಿಯೇ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿ ಎರಡು - ಮೂರು ಕಡೆ ತಪಾಸಣೆ ಮಾಡುವದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ನವದೆಹಲಿಯಿಂದ ಆಗಮಿಸಿರುವ ಕೇಂದ್ರ ಚುನಾವಣಾ ಉಪ ಆಯುಕ್ತ ಉಮೇಶ್ ಸಿನ್ಹಾ ತಿಳಿಸಿದರು.ತಪಾಸಣಾ ಕೇಂದ್ರಗಳಲ್ಲಿ ಸಿಸಿ ಟಿವಿ, ಐಪಿ ಕ್ಯಾಮೆರಾ, ಜಿಪಿಎಸ್ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಸರಳ ರೀತಿಯಲ್ಲಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ ಎಂದರು.

ಇಂದು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಚುನಾವಣಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದ ಬಳಿಕ ಅವರು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡುತ್ತಿ ದ್ದರು. ಸಿನ್ಹಾ ಅವರೊಂದಿಗೆ ನವದೆಹಲಿಯಿಂದ ಆಗಮಿಸಿದ್ದ ಕೇಂದ್ರ ಚುನಾವಣಾ ಆಯೋಗದ ಡೈರೆಕ್ಟರ್ ಜನರಲ್‍ಗಳಾದ ದಿಲೀಪ್ ಶರ್ಮ ಮತ್ತು ದೀರೇಂದ್ರ ಓಜಾ ಅವರುಗಳು ಉಪಸ್ಥಿತರಿದ್ದರು.

ಮತದಾನದ ದಿನ ಪ್ರತಿಯೊಬ್ಬ ಮತದಾರರು ಹಬ್ಬದ ವಾತಾವರಣ ದಲ್ಲಿ ಹರ್ಷದಾಯಕವಾಗಿ ಮತದಾನ ಮಾಡುವಂತಹ ವಾತಾವರಣವನ್ನು ಕಲ್ಪಿಸಲು ಅಧಿಕಾರಿ ಸಿಬ್ಬಂದಿಗಳಿಗೆ ನಿರ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಡೆಸಲಾಗುತ್ತಿದೆ. ಅಭ್ಯರ್ಥಿಗಳಿಗೂ ತರಬೇತಿ ನೀಡಲಾಗಿದೆ. ಎಲ್ಲಾ ಕಡೆ ಮತದಾನ ಜಾಗೃತಿ ಅಭಿಯಾನಗಳನ್ನು ನಡೆಸಲಾಗಿದೆ. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ವಿಕಲ ಚೇತನರಿಗೆ ಮತದಾನದಲ್ಲಿ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಈ ಎಲ್ಲಾ ಕಾರ್ಯ ಕ್ರಮಗಳನ್ನು ಕೈಗೊಳ್ಳಲು ನಾಗರಿಕರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳ ಲಾಗಿದೆ ಎಂದು ಅವರು ಮಾಹಿತಿಯಿತ್ತರು.

ಕರ್ನಾಟಕದಲ್ಲಿ ಮಾಧ್ಯಮಗಳು ಚುನಾವಣಾ ಆಯೋಗದ ಪಾಲುದಾರರಂತೆ ಸಹಕರಿಸುತ್ತಿವೆ. ಚುನಾವಣಾ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಿವೆ. ಪ್ರಾದೇಶಿಕ ದೃಶ್ಯ ಮಾಧ್ಯಮಗಳಂತೂ ಆಗಿಂದಾಗ್ಗೆ ಆಯೋಗಕ್ಕೆ ಅಗತ್ಯವಾದ ತುರ್ತು ಸಂದೇಶಗಳನ್ನು ಒದಗಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು

(ಮೊದಲ ಪುಟದಿಂದ) ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವದು ಕಂಡು ಬಂದಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ, ಆನೆಗಳ ಧಾಳಿ ಮುಂತಾದ ಸಮಸ್ಯೆಗಳನ್ನು ಆಯೋಗ ಪರಿಗಣಿಸಿದ್ದು, ಇದಕ್ಕೆ ಪೂರಕವಾಗಿ ಮತದಾನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ನುಡಿದರು. ರಾಜ್ಯದಲ್ಲಿ ಬಾದಾಮಿ, ರಾಮನಗರ, ಚೆನ್ನಪಟ್ಟಣ, ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಶಿಕಾರಿಪುರ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ನಾಯಕರುಗಳು ಸ್ಪರ್ಧಿಸುತ್ತಿರುವದರಿಂದ ವಿಶೇಷ ಮತುವರ್ಜಿ ವಹಿಸಲಾಗಿದೆಯೇ ಎಂಬ ಪ್ರಶ್ನೆಗೆ ಪುಕಾರುಗಳನ್ನು ತಕ್ಷಣವೇ ಗಮನಿಸಲಾಗುತ್ತಿದೆ. ರಕ್ಷಣಾ ದಳಗಳು ನಿರಂತರ ಜಾಗೃತವಾಗಿವೆ. ಚುನಾವಣೆಯಲ್ಲಿ ಜನಮನವನ್ನು ಒಲಿಸಿಕೊಳ್ಳಲು ಮಾಡುತ್ತಿರುವ ಖರ್ಚಿನ ಪ್ರಮಾಣದ ಬಗ್ಗೆ ವಿಶೇಷ ನಿಗಾ ವಹಿಸಲಾಗುವದು ಅಲ್ಲದೇ ಕೊಡುಗೆಗಳು, ಮದ್ಯದ ಆಮಿಷ ಜನರಿಂದ ಸೈದ್ಧಾಂತಿಕವಾಗಿ ಧಾರ್ಮಿಕವಾಗಿ ಪ್ರಮಾಣಗಳನ್ನು ಪಡೆದುಕೊಳ್ಳುವದು ಇತ್ಯಾದಿಗಳ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಮುಕ್ತ ವಾತಾವರಣದಲ್ಲಿ ನಿಷ್ಪಕ್ಷಪಾತವಾಗಿ ಮತದಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ವಲಸೆ ಬಂದವರಿಗೆ ತಕ್ಷಣವೇ ಮತ ಚೀಟಿಗಳನ್ನು ನೀಡಿರುವ ಕೆಲವೆಡೆ ನಕಲಿ ಚೀಟಿಗಳನ್ನು ಒದಗಿಸಿರುವ ಹಾಗೂ ಎರಡು ಕಡೆ ಮತ ಚೀಟಿಗಳನ್ನು ಹೊಂದಿರುವ ಪ್ರಕರಣಗಳ ಬಗ್ಗೆ ಗಮನ ಸೆಳೆದಾಗ ಎಲ್ಲಾ ಮತದಾರರ ಹೆಸರುಗಳು ಅಂತರ್ಜಾಲ ವ್ಯವಸ್ಥೆಯಲ್ಲಿ ನೋಂದಾವಣೆ ಗೊಂಡಿವೆ. ನೋಂದಾಯಿತವಲ್ಲದ ಮತ ಚೀಟಿಗಳನ್ನು ಹೊಂದಿರು ವವರಿಗೆ ಮತದಾನ ಮಾಡುವ ಅವಕಾಶ ನೀಡುವದಿಲ್ಲ. ಈಗಾಗಲೇ ಮತದಾರರ ನೋಂದಾವಣೆಗೆ ಸಾಕಷ್ಟು ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿಯಿತ್ತರು. ಈ ಸಂದರ್ಭ ರಾಜ್ಯ ಜಂಟಿ ಚುನಾವಣಾಧಿಕಾರಿ ಡಾ. ಬಿ.ಆರ್. ಮಮತಾ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಇದ್ದರು.