ಮಡಿಕೇರಿ, ಏ. 28: ದೇಶವನ್ನಾಳುತ್ತಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ತತ್ವ ಸಿದ್ಧಾಂತ ಈ ದೇಶಕ್ಕೆ ಮಾರಕ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಹೇಳಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಅವರು ಮಾತನಾಡಿದರು. ತಾನು ಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಲ್ಲ. ತಾನು ಈಗಾಗಲೇ ಎಲ್ಲಾ ರೀತಿಯ ಅಧಿಕಾರವನ್ನು ಕಂಡಿದ್ದೇನೆ. ಸಮಾಜ ಹಾಗೂ ದೇಶಕ್ಕೆ ಒಳಿತಾಗಬೇಕಾದರೆ ಎಲ್ಲರನ್ನು ಸಮಾನವಾಗಿ ಕಾಣಬೇಕಾದ ಅಗತ್ಯತೆಯಿದೆ. ಹಿಂದುತ್ವ ಎಂಬದನ್ನು ಕೆಲವರು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಮಹತ್ತರ ಜವಾಬ್ದಾರಿಯಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣತೊಡುವಂತೆ ಕರೆ ನೀಡಿದರು. ಮಡಿಕೇರಿ ವ್ಯಾಪ್ತಿಯಲ್ಲಿನ ಮತದಾರರನ್ನು ಒಲೈಸುವ ನಿಟ್ಟಿನಲ್ಲಿ ನಗರಸಭಾ ಕಾಂಗ್ರೆಸ್ ಸದಸ್ಯರ ಹೊಣೆಗಾರಿಕೆ ಹೆಚ್ಚಿದ್ದು, ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕು. ನಗರಸಭೆಯಲ್ಲಿರುವ ಜೆಡಿಎಸ್ ಸದಸ್ಯರನ್ನು ಕೂಡ ಕಾಂಗ್ರೆಸ್ಗೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ನಾಣಯ್ಯ ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಮೆಚ್ಚಿ ಹಿರಿಯ ರಾಜಕಾರಣಿ ಯಂ.ಸಿ. ನಾಣಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಕೊಡಗಿನಲ್ಲಿ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದರು. ವೇದಿಕೆಯಲ್ಲಿ ಮಾಜಿ ಸಚಿವೆ ಸುಮಾವಸಂತ್, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ಚುನಾವಣಾ ಉಸ್ತುವಾರಿ ವೆಂಕಪ್ಪಗೌಡ, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಪ್ರು ರವೀಂದ್ರ, ಕೆ.ಎ. ಲೋಕೇಶ್, ರಮಾನಾಥ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಕೂಬ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಯುವ ಕಾಂಗ್ರೆಸ್ ಜಿಲ್ಲಾಧಕ್ಷ ಹನೀಫ್, ಮತ್ತಿತರ ಪ್ರಮುಖರು ಇದ್ದರು.