ಮಡಿಕೇರಿ, ಏ. 28: ಕೊಡಗಿಗೆ ಕ್ರೀಡೆಗೂ ಎಲ್ಲಿಲ್ಲದ ನಂಟು. ಇದರಂತೆ ಜಿಲ್ಲೆಯಲ್ಲಿ ನಡೆಯುವ ಜನಾಂಗೀಯ ಕ್ರೀಡಾ ಕೂಟಗಳೂ ಕ್ರೀಡಾಸಕ್ತರ ಗಮನ ಸೆಳೆಯುತ್ತದೆ. ಕೌಟುಂಬಿಕ ಹಾಕಿ ಉತ್ಸವದಂತೆ ಕೊಡವ ಕುಟುಂಬಗಳ ನಡುವೆ ನಡೆದುಕೊಂಡು ಬರುತ್ತಿರುವ ಕೌಟುಂಬಿಕ ಕ್ರಿಕೆಟ್ ಉತ್ಸವವೂ ಇದರಲ್ಲಿ ಒಂದಾಗಿದೆ. ಕ್ರಿಕೆಟ್ ಪ್ರೇಮಿ ಕೀತಿಯಿಂಡ ಕಾರ್ಸನ್ ಕಾರ್ಯಪ್ಪ ಅವರು ಹುಟ್ಟು ಹಾಕಿರುವ ಕೌಟುಂಬಿಕ ಕ್ರಿಕೆಟ್ ಉತ್ಸವ 18 ವರ್ಷ ಪೂರೈಸಿ 19ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿಯ ಆಯೋಜಕರು ಮಕ್ಕಂದೂರು ಹಾಗೂ ಮುಕ್ಕೋಡ್ಲುವಿನ ನಡುವೆ ಬರುವ ಮೇಗತಾಳ್ ಗ್ರಾಮಕ್ಕೆ ಸೇರಿದವರಾದ ಮಡ್ಲಂಡ ಕುಟುಂಬಸ್ಥರು.ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದುಕೊಂಡು ಬರುತ್ತಿದ್ದ ‘ಕ್ರಿಕೆಟ್ ನಮ್ಮೆ’ ಈ ಬಾರಿ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುತ್ತಿದೆ. ಮಡ್ಲಂಡ ಕಪ್ -2018 ತಾ. 29 ರಂದು (ಇಂದು) ನಗರದ ಫೀ. ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಶುಭಾರಂಭ ಗೊಳ್ಳುತ್ತಿದೆ.

(ಮೊದಲ ಪುಟದಿಂದ) ಖ್ಯಾತ ಅಂತರರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅವರು ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ಧ್ವಜಾರೋಹಣವನ್ನು ಕೊಡವ ಕ್ರಿಕೆಟ್ ಉತ್ಸವದ ಜನ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಮಡ್ಲಂಡ ಕುಟುಂಬದ ಪಟ್ಟೆದಾರ ಎಂ.ಬಿ. ಪೊನ್ನಪ್ಪ, ಕ್ರಿಕೆಟ್ ಉತ್ಸವ ಸಮಿತಿ ಅಧ್ಯಕ್ಷ ಮೋನಿಶ್ ಸುಬ್ಬಯ್ಯ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬೆಂಗಳೂರಿನ ಉದ್ಯಮಿಗಳಾದ ನಾಪಂಡ ಮುದ್ದಪ್ಪ, ಅರೆಯಡ ಪವಿನ್ ಪೊನ್ನಣ್ಣ ಅವರುಗಳು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಕೊಡವ ವಾರಿಯರ್ಸ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.